ಪುರುಳೆ ಹಕ್ಕಿ !

purule-hakki
purule-hakki

 

ನನಗೆ ಈ ಕಥೆಯ ಮೂಲ ಯಾವುದು ಅಂತ ಗೊತ್ತಿಲ್ಲ. ನಾನು ಕೇಳಿದ್ದು ಮಾತ್ರ ೧೬ – ೧೭ ವರ್ಷದವನಾಗಿದ್ದಾಗ ನನ್ನ ಸೋದರಮಾವನಿಂದ. ಅದೂ ಅವರ ಮಗ ಸಣ್ಣವನಿದ್ದಾಗ ನಿದ್ದೆ ಮಾಡಿಸಲು ಹೇಳುವಾಗ ಕದ್ದು ಕೇಳಿಸಿಕೊಂಡಿದ್ದು !
ಇದರ ಸಾರಾಂಶ, ಸಂದೇಶ ನಿಮ್ಮ ಕಲ್ಪನೆಗೆ ಬಿಟ್ಟಿದ್ದು. ಇಲ್ಲಿಂದ ಮುಂದೆ ಕಥೆ, ನಾನು ಕೇಳಿಸಿಕೊಂಡಂತೆ, ನನಗೆ ನೆನಪಿದ್ದಂತೆ, ಅದರದೇ ಆದ ಧಾಟಿಯಲ್ಲಿ !
~~ ಪುರುಳೆ ಹಕ್ಕಿ ~~
 
ಒಂದು ದೊಡ್ಡ ಕಾಡಲ್ಲಿ ಒಂದು ದೊಡ್ಡ ಮರ. ಅದರ ಮೇಲೆ ಒಂದು ಹಕ್ಕಿ ಗೂಡು ಕಟ್ಟಿಕೊಂಡಿತ್ತಂತೆ. ಆ ಹಕ್ಕಿ ಹೆಸರು  ಪುರುಳೆ  ಹಕ್ಕಿ ಅಂತ. ಒಂದು ರಾತ್ರಿ ಜೋರು ಮಳೆ ಬಂದು ಗೂಡು ನೆಲಕ್ಕೆ ಬಿದ್ದು ಬಿಡ್ತಂತೆ. ಅದರ ಮೇಲೆ ಗೂಡು ಇದ್ದ ಮರಾನೂ ಬಿತ್ತಂತೆ.  ಪುರುಳೆ  ಹಕ್ಕಿ ಮರ ಎತ್ತೋಕೆ ನೋಡ್ತಂತೆ. ಆದ್ರೆ ಗೂಡಿನ ಮೇಲೆ ಬಿದ್ದ ಮರ ಎತ್ತೋಕೆ ಆಗ್ಲೇ ಇಲ್ಲ ಅದಕ್ಕೆ.  ಪುರುಳೆ ಹಕ್ಕಿ ತುಂಬಾ ಸಣ್ಣಕ್ಕೆ ಇರುತ್ತೆ ಅಲ್ವ? ಅದಕ್ಕೆ ಆ ದೊಡ್ಡ ಮರ ಹೇಗ್ ಎತ್ತೋಕೆ ಆಗತ್ತೆ ಅಲ್ವ?

 ಪುರುಳೆ ಹಕ್ಕಿ ಯಾರ್ ಹತ್ರ ಆದರೂ ಸಹಾಯ ಕೇಳೋಣ ಅಂತ ಸೀದಾ ನರಿ ಮನೆಗೆ ಹೋಯ್ತಂತೆ.
ನರಿ : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಒಂಚೂರು ಮರ ಎತ್ತಿ ಕೊಡ್ತೀಯ?” ಅಂತಂತೆ.
ಅದಕ್ಕೆ ನರಿ : “ನಾನ್ ಮರ ಎತ್ತಲ್ಲ ಹೋಗ್” ಅಂತಂತೆ.
 
ಈ ನರಿಗೆ ಮಾಡ್ಸ್ತೀನಿ ಅಂತ ಪುರುಳೆ ಹಕ್ಕಿ ಸೀದಾ ನಾಯಿ ಮನೆಗೆ ಹೋಯ್ತಂತೆ.
ನಾಯಿ : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ: “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ. ನೀನು ಹೋಗಿ ನರಿಗೆ ಕಚ್ತೀಯ?” ಅಂತಂತೆ.
ಅದಕ್ಕೆ ನಾಯಿ : “ನಾನ್ ಕಚ್ಚಲ್ಲಪ್ಪ. ” ಅಂತಂತೆ.
 
ನಾಯಿಗೆ ಬುದ್ಧಿ ಕಲ್ಸ್ತೀನಿ ಅಂತ ಪುರುಳೆ ಹಕ್ಕಿ ಸೀದಾ ದೊಣ್ಣೆ ಮನೆಗೆ ಹೋಯ್ತಂತೆ.
ದೊಣ್ಣೆ : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ. ನೀನು ಆ ನಾಯಿಗೆ ಹೊಡೀತೀಯ?” ಅಂತಂತೆ.
ಅದಕ್ಕೆ ದೊಣ್ಣೆ : “ಹೋಗ್ ಹೋಗ್, ನಾನ್ ಹೊಡ್ಯಲ್ಲ. ” ಅಂತಂತೆ.
ದೊಣ್ಣೆಗೂ ಬುದ್ಧಿ ಕಲ್ಸ್ತೀನಿ ಅಂತ ಪುರುಳೆ ಹಕ್ಕಿ ಸೀದಾ ಬೆಂಕಿ ಮನೆಗೆ ಹೋಯ್ತಂತೆ.
ಬೆಂಕಿ : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ. ನೀನು ಆ ದೊಣ್ಣೆ ಸುಡ್ತೀಯ?” ಅಂತಂತೆ.
ಅದಕ್ಕೆ ಬೆಂಕಿ : “ಈ ರಾತ್ರಿಲಿ? ನಾನ್ ಸುಡಲ್ಲ, ನಂಗ್ ಯಾಕ್ ಬೇಕು. ” ಅಂತಂತೆ.
 
ಈ ಬೆಂಕಿನೂ ಬಿಡಬಾರದು ಅಂತ ಪುರುಳೆ ಹಕ್ಕಿ ಸೀದಾ ನೀರಿನ ಮನೆಗೆ ಹೋಯ್ತಂತೆ.
ನೀರು : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ. ನೀನು ಬೆಂಕಿ ನಂದಿಸ್ತೀಯ?” ಅಂತಂತೆ.
ಅದಕ್ಕೆ ನೀರು : “ನಂಗೆ ಬೇರೆ ಕೆಲಸ ಇದೆ, ನಂಗಾಗಲ್ಲ. ” ಅಂತಂತೆ.
 
ಅಲ್ಲಿಂದ ಸೀದಾ ಪುರುಳೆ ಹಕ್ಕಿ ಎತ್ತಿನ ಮನೆಗೆ
ಹೋಯ್ತಂತೆ.
ಎತ್ತು : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು. ನೀನು ಆ ನೀರೆಲ್ಲ ಕುಡ್ದು ಬಿಡ್ತೀಯ? ” ಅಂತಂತೆ.
ಅದಕ್ಕೆ ಎತ್ತು : “ನನ್ನ ಹೊಟ್ಟೆ ತುಂಬಿ ಹೋಗಿದೆ. ನಾನ್ ಕುಡ್ಯಲ್ಲ ಹೋಗ್” ಅಂತಂತೆ.
ಸಿಟ್ಟುಕೊಂಡು ಪುರುಳೆ ಹಕ್ಕಿ ಸೀದಾ 
ಹಗ್ಗದ ಮನೆಗೆ ಹೋಯ್ತಂತೆ.
ಹಗ್ಗ : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು. ನೀನು ಆ ಎತ್ತನ್ನ ಕಟ್ಟಿ ಹಾಕ್ತೀಯ? ” ಅಂತಂತೆ.
ಅದಕ್ಕೆ ಹಗ್ಗ : “ನಂಗೆ ಜೋರು ನಿದ್ದೆ ಬರ್ತಿದೆ. ನಾನ್ ಕಟ್ಟಲ್ಲ” ಅಂತಂತೆ.
 
ಹಿಂಗೆ ಬಿಟ್ರೆ ಆಗಲ್ಲ ಅಂತ ಪುರುಳೆ ಹಕ್ಕಿ ಸೀದಾ ಇಲಿ ಮನೆ
ಗೆ ಹೋಯ್ತಂತೆ.
ಇಲಿ : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು, ಎತ್ತು ಕಟ್ಟೋಲ್ವಂತೆ ಹಗ್ಗ. ನೀನು ಹಗ್ಗಾನ ತುಂಡು ಮಾಡ್ತೀಯ? ” ಅಂತಂತೆ.
ಅದಕ್ಕೆ ಇಲಿ : “ನಂಗ್ ಪುರಸೊತ್ತಿಲ್ಲ ಹೋಗಾಚೆ” ಅಂತಂತೆ.
ಜೋರು ಸಿಟ್ಟು ಬಂದು ಪುರುಳೆ ಹಕ್ಕಿ ಸೀದಾ ಬೆಕ್ಕಿನ ಮನೆಗೆ ಹೋಯ್ತಂತೆ.
ಬೆಕ್ಕು : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು, ಎತ್ತು ಕಟ್ಟೋಲ್ವಂತೆ ಹಗ್ಗ, ಹಗ್ಗ ತುಂಡು ಮಾಡೋಲ್ವಂತೆ ಇಲಿ. ನೀನು ಆ ಇಲೀನ ಹಿಡಿತಿಯ? ” ಅಂತಂತೆ.
ಅದಕ್ಕೆ ಬೆಕ್ಕು : ನನಗು ಇದೆ ಬೇಕಾಗಿತ್ತು ಅನ್ಕೊಂಡು. “ಇಲಿ ಹಿಡಿತೀನಿ ಆದ್ರೆ ನಂಗೆ ಒಂದು ಚೊಂಬು ಪೂರ್ತಿ ಹಾಲು ತಂದುಕೊಡು” ಅಂತಂತೆ.
 
ಸರಿ ಅಂತ ಪುರುಳೆ ಹಕ್ಕಿ ಸೀದಾ ದನದ ಮನೆಗೆ ಹೋಯ್ತಂತೆ.
ದನ : “ಬಾ ಪುರುಳೆ ಬಾ. ಹಸೆ ಇದೆ ಮಣೆ ಇದೆ. ಕುಳಿತುಕೋ. ಏನು ಬಂದೆ  ಪುರುಳೆ ?” ಅಂತಂತೆ.
ಪುರುಳೆ : “ಹಸೆ ಬೇಡಾ, ಮಣೆ ಬೇಡಾ. ಗೂಡಿನ ಮೇಲೆ ಮರ ಬಿತ್ತು. ಮರ ಎತ್ತಲ್ವಂತೆ ನರಿ, ನರಿಗೆ ಕಚ್ಚೋಲ್ವಂತೆ ನಾಯಿ, ನಾಯಿಗೆ ಹೊಡೆಯೋಲ್ವಂತೆ ದೊಣ್ಣೆ, ದೊಣ್ಣೆ ಸುಡೋಲ್ವಂತೆ ಬೆಂಕಿ, ಬೆಂಕಿ ನಂದಿಸೋಲ್ವಂತೆ ನೀರು, ನೀರು ಕುಡಿಯೋಲ್ವಂತೆ ಎತ್ತು, ಎತ್ತು ಕಟ್ಟೋಲ್ವಂತೆ ಹಗ್ಗ, ಹಗ್ಗ ತುಂಡು ಮಾಡೋಲ್ವಂತೆ ಇಲಿ, ಇಲಿ ಹಿಡಿಯುತ್ತಂತೆ ಬೆಕ್ಕು. ಅದಕ್ಕೆ ಒಂದು ಚೊಂಬು ಹಾಲು ಬೇಕಂತೆ ಕೊಡ್ತೀಯ?”. ಅಂತಂತೆ.
ಅದಕ್ಕೆ ದನ : “ಹಾಲು ಬೇಕಾದ್ರೆ ಕೊಡ್ತೀನಿ, ಆದರೆ ನಂಗೆ ಜೋರು ಹಸಿವಾಗ್ತಾ ಇದೆ. ನಂಗೆ ಹುಲ್ಲು ತಂದು ಕೊಡ್ತೀಯ?” ಅಂತಂತೆ.
ಪುರುಳೆ : “ಹೋ! ಅದಕ್ಕೇನಂತೆ? ಈಗಲೇ ತಂದು ಕೊಡ್ತೀನಿ”. ಅಂತ ಕತ್ತಿ ತಗೊಂಡು ಹೋಗಿ ಒಂದು ಕಟ್ಟು ಹುಲ್ಲು ತಂದು ದನಕ್ಕೆ ಕೊಡ್ತಂತೆ.
ದನ ಆ ಹುಲ್ಲೆಲ್ಲ ತಿಂದು ಪುರುಳೆ ಹಕ್ಕಿಗೆ “ನೀನು ಹಾಲು ಕರ್ಕೋ” ಅಂತಂತೆ.
ಪುರುಳೆ ಹಕ್ಕಿ ಒಂದು ಚೊಂಬು ಪೂರ್ತಿ ಹಾಲು ತಗೊಂಡು ಹೋಗಿ ಬೆಕ್ಕಿಗೆ ಕೊಡ್ತಂತೆ.
ಬೆಕ್ಕು ಹಾಲನ್ನ ಗಟ ಗಟ ಕುಡಿದು, ಇಲೀನ ಹಿಡಿಯೋಕೆ ಅಂತ ಹೋಯ್ತಂತೆ.
ಇಲಿ : “ಅಯ್ಯೋ! ಈ ಬೆಕ್ಕು ನನ್ನ ತಿಂದು ಬಿಡತ್ತೆ” ಅಂತ ಕೂಗ್ತಾ ಸೀದಾ ಹಗ್ಗ ತುಂಡು ಮಾಡೋಕೆ ಶುರು ಮಾಡ್ತಂತೆ.
ಹಗ್ಗ : “ಇಲಿ ನನ್ನ ತುಂಡು ತುಂಡು ಮಾಡಿ ಬಿಡುತ್ತೆ” ಅಂತ, ಸೀದಾ ಹೋಗಿ ಎತ್ತನ್ನ ಕಟ್ಟೋಕೆ ನೋಡ್ತಂತೆ.
ಎತ್ತು : “ಹಗ್ಗ ನನ್ನ ಕಟ್ಟಿ ಹಾಕಿದ್ರೆ, ಮತ್ತೆ ನಾನು ಎಲ್ಲೂ ಹೋಗೋಕೆ ಆಗಲ್ಲ” ಅಂತ ಓಡಿ ಹೋಗಿ ನೀರು ಕುಡಿಯೋಕೆ ಶುರು ಮಾಡ್ತಂತೆ.
ನೀರು : “ಈ ಎತ್ತು ನನ್ನ ಪೂರ್ತಿ ಕುಡಿದು ಬಿಟ್ರೆ” ಅಂತ ಹೆದರಿಕೆ ಆಗಿ ಸೀದಾ ಬೆಂಕಿನ ನಂದಿಸೋಕೆ ಹೋಯ್ತಂತೆ.
ಬೆಂಕಿ : “ನೀರು ನನ್ನ ನಂದಿಸಿ ಬಿಟ್ರೆ ಮತ್ತೆ ನಾನು ಇರೋದೇ ಇಲ್ಲ” ಅಂತ ದೊಣ್ಣೆ ಸುಡಕ್ಕೆ ಶುರು ಮಾಡ್ತಂತೆ.
ದೊಣ್ಣೆ : “ಅಯ್ಯಯ್ಯೋ! ಬೆಂಕಿ. ನನ್ನ ಸುಡಬೇಡ” ಅಂತ ನಾಯಿಗೆ ಹೊಡೆಯೋಕೆ ಶುರು ಮಾಡ್ತಂತೆ.
ಮಲ್ಕೊಂಡಿದ್ದ ನಾಯಿ ಇದ್ದಕ್ಕಿದ್ದಂಗೆ ಹೊಡೆತ ಬಿದ್ದಿದ್ದು ನೋಡಿ “ಕೊಂಯ್ ಕೊಂಯ್” ಅಂತ ಓಡಿ ಹೋಗಿ ನರಿಗೆ ಕಚ್ತಂತೆ.
ನರಿ  : “ಪುರುಳೆ ಹಕ್ಕಿ, ನಾಯಿಗೆ ಕಚ್ಬೇಡ ಅಂತ ಹೇಳು! ಮರ ಎತ್ತಿ ಕೊಡ್ತೀನಿ” ಅಂತ ನಾಯಿಗಿಂತ ಜೋರಾಗಿ ಓಡಿ ಹೋಗಿ ಗೂಡಿನ ಮೇಲೆ ಬಿದ್ದಿದ್ದ ಮರ ಎತ್ತಿ, ಗೂಡೆಲ್ಲ ಸರಿ ಮಾಡಿ, ಇನ್ನೊಂದು ಮರದ ಮೇಲೆ ಗೂಡನ್ನ ಇಟ್ಟು. ಇನ್ನು ಯಾವತ್ತೂ ಸಹಾಯ ಕೇಳಿದವರಿಗೆ ಮಾಡದೆ ಇರಲ್ಲ ಅಂತ ಸೀದಾ ಮನೆಗೆ ಹೋಯ್ತಂತೆ.
ಆಮೇಲಿಂದ ಪುರುಳೆ ಹಕ್ಕಿ ತನ್ನ ಮಕ್ಕಳ ಜೊತೆ ಸುಖ್ವಾಗ್ ಇತ್ತಂತೆ.

You may also like...

1 Response

  1. Aditi says:

    Billu is given by raita in this story

Leave a Reply

Your email address will not be published. Required fields are marked *