ಶಿಕ್ಷಕರಿಗೊಂದು ಸೆಲ್ಯೂಟ್
http://www.panjumagazine.com/?p=4499
ಶಿಕ್ಷಕರು ಅಂದ್ರೆ ದೇವರಿದ್ದಂತೆ, ಶಿಕ್ಷಕರು ಎಷ್ಟು ಒಳ್ಳೆಯವರಾಗಿರ್ತಾರೋ ಅವರ ವಿದ್ಯಾರ್ಥಿಗಳೂ ಅಷ್ಟೇ ಒಳ್ಳೆಯವರಾಗಿರ್ತಾರೆ ಅಂತೆಲ್ಲಾ ಕೊರೀತಾ ಕೂತ್ರೆ ಒಂದು ನಕ್ಷತ್ರ ಹುಟ್ಟಿ ಅದು ಕಪ್ಪು ರಂಧ್ರ ಸ್ಥಿತಿ ತಲುಪುವವರೆಗೂ ಕೊರೀಬಹುದು. ಇಂಥವೆಲ್ಲಾ ಬಿಟ್ಟು ಬೇರೆ ಏನಾದ್ರೂ ಹೇಳೋಣಾ ಅಂದ್ರೆ ಅವರನ್ನು ಬಯ್ಯೋದೋ, ಹೊಗಳೋದೋ ಅಥವಾ ಹೀಗೇ ನೆನಪು ಮಾಡ್ಕೊಳ್ತಾ ಇರೋದೋ ಗೊತ್ತಾಗ್ತಿಲ್ಲ.
ಒಂದು ಕಡೆಯಿಂದ ಶುರು ಮಾಡುವುದಾದರೆ ನಾವೆಲ್ಲಾ ಅಂಗನವಾಡಿ ಅಥವಾ ಶಿಶುವಾರಕ್ಕೆ ಹೋಗುವಾಗ ಅಲ್ಲಿದ್ದ ಲಕ್ಷ್ಮೀದೇವಿ ಟೀಚರ್ ನಮ್ಮಂಥ ಚಿಕ್ಕ ಮ(೦ಗಗ)ಕ್ಕಳ ಗುಂಪನ್ನು ಹೇಗೆ ಸಹಿಸಿಕೊಳ್ತಿದ್ರೋ ನಾ ಕಾಣೆ. ಇವತ್ತಿಗೂ ಸಿಕ್ಕಿದಾಗ “ಹೇಗಿದ್ಯಪ್ಪಾ? ಏನ್ ಮಾಡ್ತಾ ಇದೀಯ ಈಗ? ಅಪ್ಪ, ಅಮ್ಮ ಚೆನಾಗಿದಾರ?” ಅಂತ ನೂರೆಂಟು ಪ್ರಶ್ನೆ ಕೇಳೋ ಲಕ್ಷ್ಮೀದೇವಿ ಟೀಚರ್ ನಾ ಚಿಕ್ಕವನಿದ್ದಾಗ ಅತ್ತರೆ ಸಮಾಧಾನ ಮಾಡಿ, ತಪ್ಪು ಮಾಡಿದಾಗ ನನ್ನಂಡಿನ ಮೇಲೆ ನಾಲ್ಕು ಬಾರಿಸಿ ಕೂರಿಸುತ್ತಿದ್ದರೇನೋ!
ಐದರಿಂದ ಏಳರವರೆಗೆ ಓದಿದ ಸ್ಕೂಲಿನಲ್ಲಿ ಬಹಳಷ್ಟು ಜನ ಶಿಕ್ಷಕರಿದ್ದರು. ಆದಷ್ಟು ಜನರನ್ನ ನೆನಪು ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ಕನ್ನಡಕ ಹಾಕ್ಕೊತಾ ಇದ್ದ ರೋಜಾಮಣಿ ಟೀಚರ್. ನನ್ನ ಕ್ಲೋಸ್ ಫ್ರೆಂಡಿನ ತಂದೆ ಚನ್ನಕೇಶವ ಮೇಷ್ಟ್ರು. ‘ತಪ್ಪಾ ಮಾಡಿದ ಮ್ಯಾಲೆ, ಶಿಕ್ಷೆ ಅನುಭವಿಸಲೇ ಬೇಕು’ ಅಂತ ಹೇಳ್ತಾ ಸಿಕ್ಕಾಪಟ್ಟೆ ಹೊಡೀತಾ ಇದ್ದ ಗೋಪಾಲ್ ಮಾಷ್ಟ್ರು. ಬೆಲ್ ಹೊಡೆದ ಕೂಡ್ಲೇ ‘ಕನ್ನಡದಾ ಮಕ್ಕಳೆಲ್ಲ ಒಂದಕ್ಕೋಗಿ ಬನ್ನಿ’ ಅಂತ ರಾಗವಾಗಿ ಹೇಳಿ ಹೊರಗೆ ಕಳಿಸುತ್ತಿದ್ದ ಓಂಕಾರಪ್ಪ ಮಾಷ್ಟ್ರು. ಶಾಲೆಯಲ್ಲಿ ಯಾವುದೇ ಸಮಾರಂಭ ಇದ್ದರೂ ಹಾಡು, ಡ್ಯಾನ್ಸ್, ನಾಟಕ, ಭಾಷಣ ಎಲ್ಲಾ ಹೇಳಿ ಕೊಟ್ಟು ಸಮಾರಂಭಕ್ಕೆ ಡ್ರೆಸ್ ಮಾಡಿಸಿ ಕಳಿಸುತ್ತಿದ್ದ ನಾಗರತ್ನ ಟೀಚರ್, ಶೈಲಜಾ ಟೀಚರ್. ನಮಗೆಲ್ಲ ಖೋ ಖೋ, ಕಬಡ್ಡಿ, ವಾಲಿಬಾಲ್, ಅದೂ, ಇದೂ, ಮತ್ತೊಂದು ಅಂತ ನಮಗೆ ಗೊತ್ತಿಲ್ದೇ ಇರೋ ಆಟವನ್ನೆಲ್ಲ ಕಲಿಸಿದ ರೇವತಿ ಟೀಚರ್. ಹೆಡ್ ಮಾಷ್ಟ್ರ ಕುರ್ಚಿಯಲ್ಲಿ ಕೂರುವ, ರೂಲರ್ ದೊಣ್ಣೆಯಲ್ಲಿ ಮಾತ್ರ ಹೊಡೆಯುವ ನಾಗರಾಜ್ ಮೇಷ್ಟ್ರು. ಇದೇ ರೀತಿ ಹೈಸ್ಕೂಲು, ಕಾಲೇಜಿನ ಶಿಕ್ಷಕರನ್ನೆಲ್ಲಾ ನೆನಪಿಸಿಕೊಂಡರೆ ನಮ್ಮ ಭೂಮಿಯ ಮೇಲಿರೋ ಜನಸಂಖ್ಯೆಯಷ್ಟು ನೆನಪುಗಳು ತಲೆಗೆ ಬರ್ತವೆ.