“ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” : ಒಂದು ಕಥೆ
ಮೊನ್ನೆ ಬೆಳಿಗ್ಗೆ ಮುಂಚೆ 5:30 ರ ಸುಮಾರಿಗೆ ಮಲಗಿದವನಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಕಾರಣ ಒಂದು ಕೆಟ್ಟ ಕನಸು! ಆ ಕನಸಿಗೆ, ಎಚ್ಚರವಿರುವಾಗ ಇನ್ನಷ್ಟು ಯೋಚನೆಯನ್ನು ಬೆರೆಸಿ ಈ “ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು” ಎಂಬ ಕಥೆಯನ್ನು ಬರೆಯಲು ಪ್ರಯತ್ನಿಸಿದ್ದೇನೆ. ಪುರಸೊತ್ತಿದ್ದರೆ ಒಮ್ಮೆ ಓದಿಬಿಡಿ !
“ಲೋ ಮಚ್ಚಾ ಮತ್ತು ಕೆಂಪು ಹಲ್ಲುಗಳು”
ಟ್ನಿಕ್ ಟಿಕ್ ಟಿಕ್ ಟಿಕ್ ಟ್ನಿಕ್ ಟಿಕ್ ಟಿಕ್ ….. ಟ್ರೀ ಟುಕ್ ಟುಕ್ ಟ್ರೀ ಟುಕ್ ಟುಕ್ ಟ್ರೀ ಟುಕ್ ಟುಕ್
ಈ ರಾತ್ರಿ 12 ಗಂಟೇಲಿ ಅದ್ಯಾರು ಫೋನ್ ಮಾಡ್ತಿದಾರಪ್ಪ? ಅನ್ಕೊಂಡು ಫೋನ್ ನೋಡ್ತೀನಿ, ಮೊಬೈಲ್ ‘ಕರಡಿ’ ಅಂತ ತೋರಿಸ್ತಾ ಇದೆ. ಏನ್ ಆಯ್ತಪ್ಪ ಇವ್ನಿಗೆ ಅನ್ಕೊಂಡು ರಿಸೀವ್ ಮಾಡಿ “ಹಲೋ” ಅಂದೆ.
“ಲೋ ಮಚ್ಚಾ, ನಾಳೆ ಏನೋ ಪ್ಲಾನ್ ನಿಂದು?” ಆ ಕಡೆಯಿಂದ ಒಂದೇ ಉಸಿರಿಗೆ ಕೂಗ್ತಿದಾನೆ.
“ಅಂಥಾದ್ದೇನೂ ಇಲ್ಲ. ಒಂದು ಮೂಟೆ ಬಟ್ಟೆ ತೊಳೀಬೇಕು ಅಷ್ಟೆ” ಅಂದೆ.
“ಸರಿ ಹಂಗಾದ್ರೆ! ಟ್ರಿಪ್ ಹೋಗೋಣ. ನಾನು, ನೀನು, ಮಂಗ. ಸ್ಯಾಂಡ್ ಬರ್ತಾನಾ ಕೇಳು. ನಂದು ಒಂದು ಬೈಕು ಮಂಗಂದು ಒಂದು ಬೈಕು. ಬೆಳಿಗ್ಗೆ ಮುಂಚೆ ಹೊರಡೋಣ”
“ಯಾವ ಕಡೆಗೆ ಹೋಗ್ತಿದೀವಿ ಅಂತ ಕೇಳಬಹುದಾ ಸಾರ್” ಅಂದೆ.
“ಹೋಗ್ತೀವಲ್ಲಾ. ನಿಂಗೇ ಗೊತ್ತಾಗತ್ತೆ. ನೀನು, ಸ್ಯಾಂಡ್ ಇಬ್ರೂ ಬೆಳಿಗ್ಗೆ 7 ಗಂಟೆ ಹೊತ್ತಿಗೆ ರೆಡಿ ಇರಿ. ತಿಂಡಿ ತಿಂದು ಹೊರಡೋಣ” ಅಂದ.
ಸ್ಯಾಂಡ್ ನ ಎಬ್ಬಿಸಿ ಬೆಳಿಗ್ಗೆ ಬೇಗ ಹೊರಡಬೇಕು ಅಂತ ಹೇಳಿ. ಅವನ ಹತ್ರ ಎಬ್ಬಿಸಿದ್ದಕ್ಕೆ ಸ್ವಲ್ಪ ಬೈಸಿಕೊಂಡು ಮಲಗಿದೆ.
ಬೆಳಿಗ್ಗೆ ಬೇಗ ಎದ್ದು 7 ಗಂಟೆಗೇ ತಯಾರಾಗಿ ಕೂತಿದ್ರೆ ಆಸಾಮಿ ಪತ್ತೇನೇ ಇಲ್ಲ. ಅಂತೂ 7:30 ರ ಹೊತ್ತಿಗೆ ಕರಡಿ, ಮಂಗ ಇಬ್ರೂ ರೂಮಿಗೆ ಬಂದ್ರು. ಹೊರಟು 4th ಬ್ಲಾಕ್ ಹತ್ರ ಹೋಗಿ ತಿಂಡಿ ತಿಂದು ಬನ್ನೇರುಘ್ಹಟ್ಟದ ದಾರೀಲಿ ಬೈಕು ಮುಂದೆ ಹೊರಟಿತು.
“ಬನ್ನೇರುಘ್ಹಟ್ಟಕ್ಕೆ ಹೋಗ್ತಿದೀವಾ?” ಬೈಕ್ ಓಡಿಸುತ್ತಿದ್ದ ಕರಡೀನ ಕೇಳ್ದೆ.
“ಇಲ್ಲಾ ಮಚ್ಚಾ. ಬನ್ನೇರುಘ್ಹಟ್ಟದಿಂದ ಮುಂದೆ ಹತ್ತು ಕಿಲೋಮೀಟರ್ ಹೋದ್ರೆ ‘ಕಾಗೆ ಕಾಲು ಗುಡ್ಡ’ ಅಂತ ಒಂದು ಜಾಗ ಇದೆ ಅಲ್ಲಿಗೆ” ಅಂದ.
“ಏನು ಕಾಗೇನೋ, ಏನು ಗುಡ್ಡಾನೋ, ಏನಿದೆ ಅಲ್ಲಿ? ಬರೀ ಗುಡ್ಡಾನಾ?” ನಂಗೆ ಹೆಸರು ಕೇಳೇ ಒಂಥರಾ ಕಾತರಿಕೆ.
“ಅಲ್ಲ. ಕಾಡಿನ ಮಧ್ಯೆ ಗುಡ್ಡ, ಗುಡ್ಡದ ಮೇಲೆ ಕೋಟೆ ಇದ್ಯಂತೆ. ಮಂಗನ ಹತ್ರ ಕೇಳು. ಅವ್ನೇ ಹೇಳಿದ್ದು”
ಅಷ್ಟೊತ್ತಿಗೆ ದಾರಿ ಬದೀಲಿ ಅದ್ಯಾವ್ದೋ ಅಂಗಡಿ ಎದುರಿಗೆ ಬೈಕ್ ನಿಲ್ಲಿಸಿದ್ವಿ. ಒಂದಷ್ಟು ತಿಂಡಿ ತಗೊಂಡು, ಸ್ಯಾಂಡ್ ಒಬ್ನೇ ಬ್ಯಾಗ್ ತಂದಿದ್ರಿಂದ ಅವನ ಬ್ಯಾಗಿಗೆ ಎಲ್ಲ ತಿಂಡೀನೂ ತುಂಬಿ ಮತ್ತೆ ಹೊರಟ್ವಿ.
ಈ ಸಲ ಮಂಗನ ಬೈಕಿನಲ್ಲಿ ಕೂತಿದ್ದ ನಾನು ಅವನನ್ನ ಕೇಳಿದೆ “ಹೆಂಗೆ ಗೊತಾಯ್ತೋ ಈ ಜಾಗ ನಿಂಗೆ?”
“ಸುಮ್ನೆ ಫೇಸ್ಬುಕ್ ಅಲ್ಲಿ ಏನೋ ನೋಡ್ತಿದ್ದೆ ನನ್ ಫ್ರೆಂಡ್ ಒಬ್ಬ ಒಂದು ವೆಬ್ ಸೈಟ್ ಲಿಂಕ್ ಮೆಸ್ಸೇಜ್ ಮಾಡ್ದ. ನೋಡ್ದೆ. ಒಂಥರಾ ಬೇರೆ ಥರ ಇತ್ತು. ಹೋಗಣ ಅಂತ ಪ್ಲಾನ್ ಮಾಡಿದ್ವಿ” ಅಂದ.
ಒಂದಷ್ಟು ದೂರ ಹೋದ ಮೇಲೆ ಎಡಗಡೆಗೆ “ಕಾಗೆ ಕಾಲು ಗುಡ್ಡಕ್ಕೆ” ಅಂತ ಒಂದು ಬೋರ್ಡು ಕಾಣ್ತು. ಆ ಹಳೆಯ ಮರದ ಬೋರ್ಡು ತೋರಿಸಿದ್ದ ಮಣ್ಣಿನ ದಾರೀಲಿ ಒಂದು ಕಿಲೋಮೀಟರ್ ನಷ್ಟು ದೂರ ಹೋಗಿರಬಹುದು, ಮಣ್ಣಿನ ದಾರಿ ಅಲ್ಲಿಗೇ ಕೊನೆಯಾಗಿತ್ತು.
ತುಕ್ಕು ಹಿಡಿದಿರೋ ತಂತಿ ಬೇಲಿ ಮಧ್ಯ ಬಿಟ್ಟಿದ್ದ ಸ್ವಲ್ಪ ಜಾಗದಿಂದ ಒಂದು ಕಾಲುದಾರಿ ಮುಂದೆ ಹೋಗಿತ್ತು, ದೂರದಲ್ಲಿ ಕೋಟೆ ರೀತಿ ಕಪ್ಪು ಕಲ್ಲಿನ ಕಟ್ಟಡ ಕಂಡಿತು. ಬೈಕು ಅಲ್ಲೇ ನಿಲ್ಲಿಸಿ ಕಾಲುದಾರೀಲಿ ಹೊರಟ್ವಿ.
“ಲೇ ಮಂಗ. ಕೋಟೆ ಗುಡ್ಡದ ಮೇಲೆ ಅಂದೆ, ಇಲ್ಲೇ ಕಾಣ್ತಿದೆ?” ಮಂಗನ ಬೆನ್ನಿಗೆ ಹೊಡೆಯುತ್ತಾ ಸ್ಯಾಂಡ್ ಕೇಳಿದ.
ಅಷ್ಟೊತ್ತಿಗೆ ಆ ಕೋಟೆ ಹತ್ರ ಬಂದಿದ್ವಿ. ಟೀ ಅಂಗಡಿ ರೀತಿಯ ಒಂದು ಚಿಕ್ಕ ಅಂಗಡಿ ಹಾಕ್ಕೊಂಡು ಗಾಜಿನ ಲೋಟಗಳಲ್ಲಿ ಕೆಂಪು ಬಣ್ಣದ ಜ್ಯೂಸ್ ಇಟ್ಕೊಂಡು ಒಬ್ಬ ಮಾರಾಟಕ್ಕೆ ನಿಂತಿದ್ದ. ಕೋಕಂ ಜ್ಯೂಸ್ ಇರಬಹುದು ಅನ್ಕೊಂಡೆ. ಮಂಗ ಅವನ ಹತ್ತಿರ ಹೋಗಿ “ಕಾಗೆ ಕಾಲು ಗುಡ್ಡಕ್ಕೆ ಹೇಗೆ ಹೋಗ್ಬೇಕು?” ಅಂತ ಕೇಳ್ದ.
ಗುಟ್ಕಾ ಪ್ರಭಾವದಿಂದ ಕೆಂಪಗಾಗಿದ್ದ ತನ್ನ ಹಲ್ಲುಗಳನ್ನು ತೋರಿಸ್ತಾ ಯಾವುದೋ ಭಾಷೇಲಿ ಎದುರಿಗೆ ಇದ್ದ ದಟ್ಟ ಕಾಡಿನ ಕಡೆ ಕೈ ಮಾಡಿ ಏನೋ ಹೇಳ್ತಾ ಇದಾನೆ. ಅವನು ಮಾತಾಡುವಾಗ ‘ಇರುಕುದು’, ‘ಇಕ್ಕಡ’ ಅನ್ನೋ ಪದಗಳೇನಾದ್ರೂ ಬರ್ತಾ ಇದ್ಯಾ ನೋಡ್ದೆ. ಊಹುಂ! ಅವನು ಮಾತಾಡ್ತಾ ಇರೋದು ತಮಿಳು, ತೆಲುಗು ಅಥವಾ ಭಾರತದ ಯಾವ ಭಾಷೇನೂ ಅಲ್ಲ ಅನ್ನಿಸ್ತು.
ಕಾಡಿನ ಕಡೆ ಕೈ ತೋರಿಸುತ್ತಿದ್ದ ಅಂಗಡಿಯವನು ಆ ಕಡೆಗೇ ನಡೆದುಕೊಂಡು ಹೊರಟ. “ಅಲ್ಲೇನಿದ್ಯೋ ನೋಡ್ಕೊಂಡು ಬರ್ತೀನಿ” ಅಂತ ನಮ್ಮ ಸ್ಯಾಂಡ್ ಅವನ ಹಿಂದೇನೆ ಹೊರಟ.
“ಬ್ಯಾಗ್ ಕೊಟ್ಟು ಹೋಗೋ. ಹಸಿವಾಗ್ತಿದೆ” ಅಂತ ಮಂಗ ಬ್ಯಾಗ್ ತಗೊಂಡು ತಿಂಡಿ ತೆಗೆಯೋಕೆ ಶುರು ಮಾಡ್ದ.
ಎಡಗಡೆಗೆ ಇದ್ದ ಕೋಟೆ ಏನಿಲ್ಲವೆಂದರೂ ಹತ್ತು ಅಡಿ ಎತ್ತರವಿತ್ತು. ಆ ಪಾಳು ಬಿದ್ದ ಕೋಟೆಗೆ ಮುಂಚೆ ಹೆಬ್ಬಾಗಿಲು ಇದ್ದಿರಬಹುದಾದ ಒಂದು ಜಾಗ, ಅದರ ಮುಂದೆ ದಾರಿ ಇತ್ತು.
“ಅಲ್ಲೇನಿದೆ ನೋಡೋಣ ಬಾ” ಅಂತ ಕರಡಿ ಆ ಕಡೆ ಹೊರಟ ಅವನ ಹಿಂದೆ ನಾನೂ ಹೊರಟೆ. ನನಗಿಂತ ಐದಾರು ಅಡಿ ಮುಂದೆ ಇದ್ದ ಕರಡಿ ಬಾಗಿಲು ದಾಟಿದ ಕೂಡಲೇ ಓಡೋಕೆ ಶುರು ಮಾಡಿದ!
“ಲೇ. ಸುಮ್ನೆ ಓಡಬೇಡ ನಿಲ್ಲೋ” ಅಂತ ನಾನು ಆ ಬಾಗಿಲು ದಾಟಿ ಬಲಗಡೆಗೆ ನೋಡ್ತೀನಿ ಒಬ್ಬ ಮೈಯೆಲ್ಲಾ ಸುಟ್ಟಂತಿದ್ದ ಮನುಷ್ಯ ಕೊಡಲಿಯಂಥ ವಸ್ತು ಹಿಡಿದು ನನ್ನ ಕಡೆಗೇ ಬರ್ತಿದ್ದ. ಕರಡಿ ಓಡಿದ್ದಕ್ಕೆ ಕಾರಣ ಗೊತ್ತಾಯ್ತು! ಮುಂದೆ ನೋಡ್ತೀನಿ ಕರಡಿ ಕಾಣ್ತಿಲ್ಲ! ಆ ಸಮಯದಲ್ಲಿ ಕೊಡ್ಲಿ ಮನುಷ್ಯ ನನ್ನ ಹಿಂದೆ ಬಂದು ನಿಂತುಬಿಟ್ಟಿದ್ದ! ಕೋಟೆಯ ದಾರಿ ಮುಂದೆ ಹೋಗುತ್ತಾ ಬಲಗಡೆಗೆ ತಿರುಗಿತ್ತು. ಕರಡಿ ಆ ಕಡೆಗೇ ಹೋಗಿರಬೇಕು ಅಂತ ತಿಳಿದು “ಮಂಗಾಆ..ಆ.. ಈ ಕಡೆ ಬರಬೇಡಾ… ವಾಪಸ್ ಹೋಗು..” ಅಂತ ಕೂಗ್ತಾ ನಾನೂ ಕೋಟೆಯ ದಾರೀಲಿ ಓಡೋಕೆ ಶುರು ಮಾಡಿದೆ.
ಹಾಗೇ ಒಂದು ಫರ್ಲಾಂಗ್ ನಷ್ಟು ಓಡಿದವನು ಒಂದು ಕಡೆ ಕೋಟೆ ಪಾಳು ಬಿದ್ದಿದ್ದನ್ನು ನೋಡಿ ಆ ಜಾಗದಿಂದ ಕೋಟೆಯ ಗೋಡೆ ಹತ್ತಿದ್ರೆ, ಯಾರಾದ್ರು ಬಂದ್ರೆ ಅವರ ಮೈ ಮೇಲೆ ಬೀಳಬಹುದು ಅಂತ ಲೆಕ್ಕ ಹಾಕಿ ಗೋಡೆ ಹತ್ತಿ ಮೇಲಿನ ಕೊನೇ ಕಲ್ಲಿನ ಮೇಲೆ ಕೂತು ಹಿಂದೆ ತಿರುಗ್ತೀನಿ ಆ ಕೊಡ್ಲಿ ಮನುಷ್ಯ ನನ್ನ ಹಿಂದೆಯೇ ಇದಾನೆ!
ಅವನು ಜೋರಾಗಿ ನಗುತ್ತಾ ಕೊಡಲಿ ಎತ್ತಿ ನನ್ನ ಕಡೆ ಬೀಸಿದ. ಅದರಿಂದ ತಪ್ಪಿಸಿಕೊಳ್ಳಬೇಕೆಂದು ನಾನು ಹಿಂದಕ್ಕೆ ಬಗ್ಗಿದೆ. ಅಷ್ಟೇ! ನಾನು ಕೂತಿದ್ದ ಕಲ್ಲು ಜಾರಿ ಹತ್ತು ಅಡಿ ಎತ್ತರದ ಗೋಡೆಯಿಂದ ಕೆಳಗೆ ಬಿದ್ದೆ.
ಒಂದೊಂದೇ ನೆನಪಾಯಿತು.
ಜ್ಯೂಸ್ ಅಂಗಡಿಯವನು ಇಟ್ಟುಕೊಂಡಿದ್ದ ಕೆಂಪಗಿನ ದ್ರವ ಏನು?!
ಅಂಗಡಿಯವನ ಮತ್ತೆ ಕೊಡ್ಲಿ ಮನುಷ್ಯನ ಹಲ್ಲು ಯಾಕೆ ಕೆಂಪಗಾಗಿದೆ?!
ಏನೇನೋ ಯೋಚನೆ ತಲೆಗೆ ಬಂತು.
ಆ ಕೊಡ್ಲಿ ಮನುಷ್ಯ ನನ್ನ ಕಡೆಗೇ ಬರುತ್ತಿದ್ದ. ಮೇಲಿಂದ ಬಿದ್ದ ಪೆಟ್ಟಿಗೋ, ಅವನನ್ನು ನೋಡಿದ ಭಯಕ್ಕೋ ನನ್ನ ಕಣ್ಣು ಮುಚ್ಚಿಹೋಯಿತು.
ನಾನು ಸತ್ತಿಲ್ಲ ಅಂತ ಮತ್ತೆ ನಾನು ಕಣ್ಣು ಬಿಟ್ಟಾಗ್ಲೇ ಗೊತ್ತಾಗಿದ್ದು. ಕಣ್ಣು ಬಿಟ್ಟ ಕೂಡ್ಲೇ ಕಂಡಿದ್ದು ಮಂಗ. ಹಂಗೇ ಸುತ್ತಲೂ ನೋಡಿದೆ, ಸ್ಯಾಂಡ್, ಕರಡಿ ಜೊತೆ ಜ್ಯೂಸ್ ಅಂಗಡಿಯವನು, ಕೊಡ್ಲಿ ಮನುಷ್ಯನೂ ಇದ್ದ!
“ಏ! ಹೊಡೀರೋ ಆ #$###$$**ಂಗೆ ಅಂತ ಹೇಳ್ತಾ ಎದ್ದು ಕೂತೆ”
ಕರಡಿ, ಮಂಗ, ಅಂಗಡಿಯವನು, ಕೊಡ್ಲಿ ಮನುಷ್ಯ ಎಲ್ಲರೂ ನಗ್ತಿದಾರೆ! ನಂಗೆ ಏನಾಗ್ತಿದೆ ಅಂತಾನೇ ಗೊತ್ತಾಗ್ತಿಲ್ಲ. ಸ್ಯಾಂಡ್ ಕಡೆ ನೋಡ್ದೆ, ಅವನ ಮುಖ, ಮೈ ಎಲ್ಲ ಮಣ್ಣಾಗಿದೆ.
“ಏನೋ ಸ್ಯಾಂಡ್ ಇದು? ಏನಾಗ್ತಿದ್ಯೋ ಇಲ್ಲಿ?” ಸ್ಯಾಂಡ್ ಹತ್ರ ಕೇಳ್ದೆ.
“ಇವ್ರದ್ದೇನೋ ಡಬ್ಬಾ ‘ಸ್ಕೇರೀ ಫೋರ್ಟ್’ ಅಂತೆ ಮಾರಾಯ! ಮಾಲ್ ಗಳಲ್ಲಿ ‘ಸ್ಕೇರೀ ಹೌಸ್’ ಇರುತ್ತಲಾ ಆ ಥರ ಅಂತೆ” ಅಂದ.
ಈ ದಿನ ನನಗಾದ ಪಾಡು ನೋಡಿ ನಗುತ್ತಾ, ಎರಡು ಮೂರು ಕಲ್ಲುಗಳನ್ನು ತೆಗೆದು ಕರಡಿ, ಮಂಗನ ಕಡೆಗೆ ಬೀಸಿ ಒಗೆದಾಗಿತ್ತು.
ಓದೋಕಿಂತ ಕೇಳೋಕೆ ಇಷ್ಟಾನಾ? ಇದೇ ಕಥೆಯನ್ನ ಇಲ್ಲಿ ಕೇಳಿ
Visit: Nallikayi
Photo Courtesy : Google