ಗಣಿತದ ಹೋಂ ವರ್ಕ್
ನಾನು ಬೆಳಗ್ಗೆ ಪುಸ್ತಕಗಳನ್ನ ಚೀಲಕ್ಕೆ ತುಂಬುವಾಗಲೇ ನೆನಪಾಗಿದ್ದು, ಇವತ್ತಿಗೆ ಬರೆಯಲು ಹೇಳಿದ್ದ ಗಣಿತ ಹೋಂ ವರ್ಕ್ ಬರೆದಿಲ್ಲ ಅಂತ! ‘ನಿನ್ನೆ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್ಲಿನಲ್ಲಿ ಭಾರತ ಸೋಲೋದನ್ನ ನೋಡೋಕಿಂತ ಹೋಂ ವರ್ಕ್ ಆದ್ರೂ ಮಾಡಿದ್ರೆ ನಾಗರತ್ನ ಟೀಚರ್ ಹತ್ರ ಪೆಟ್ಟು ತಿನ್ನೋದು ಉಳೀತಿತ್ತು’ ಅಂತ ಬೈಕೋತಾ, ಇನ್ನೂ ಲೇಟ್ ಆದ್ರೆ ಬಸ್ ಸಿಗಲ್ಲ ಸ್ಕೂಲಿಗೆ ಹೋಗೋಕೆ ಅನ್ಕೋತಾ ಮನೆಯಿಂದ ಒಂದು ಕಿ.ಮೀ. ದೂರ ಇರುವ ಬಸ್ ಸ್ಟಾಪಿನ ಕಡೆಗೆ ಓಡೋಕೆ ಶುರು ಮಾಡಿದೆ. ಅಡಿಕೆ ತೋಟದ ನಡುವೆ ಇರೋ ಸಣ್ಣ ಕಾಲು ದಾರಿಯಲ್ಲಿ ಓಡಿ ಬಸ್ ಸ್ಟಾಪ್ ತಲುಪುವುದಕ್ಕೂ, ಬಸ್ ಬರುವುದಕ್ಕೂ ಸರಿಯಾಗಿ ಏದುಸಿರು ಬಿಡುತ್ತಾ ಬಸ್ ಹತ್ತಿದೆ.
ಬಸ್ಸಿನಲ್ಲೇ ಆಗಲೇ ಯಮಗಾತ್ರದ ಬ್ಯಾಗುಗಳನ್ನು ಬೆನ್ನಿಗೆ ನೇತುಹಾಕಿಕೊಂಡಿದ್ದ ಶಾಲೆಯ ಹುಡುಗರು, ಹುಡುಗಿಯರು ತುಂಬಿಕೊಂಡಿದ್ದರಿಂದ ಅವರೆಲ್ಲರಂತೆಯೇ ನಿಲ್ಲದೇ ನನಗೆ ಬೇರೆ ವಿಧಿಯಿರಲಿಲ್ಲ. ನಿಲ್ಲೋದೇ ಕಷ್ಟವಿರೋ ಕಡೆ ಹೆಂಗೋ ಜಾಗ ಮಾಡ್ಕೊಂಡು ಬರ್ತಿದ್ದ ಕಂಡಕ್ಟರ್ ಲೋಕೇಶಣ್ಣ “ಈ ಬ್ಯಾಗ್ ತೆಗ್ದು ಇಲ್ಲಿ ಕೂತೋರಿಗೆ ಕೊಡು ಮಾರಾಯ” ಅಂತ ಈಗಾಗಲೇ ಮೂರು ಬ್ಯಾಗನ್ನ ಕಾಲಿನ ಮೇಲೆ ಹಿಡಿದು ಕೂತಿದ್ದವನ ಮೇಲೆ ನನ್ನ ನಾಲ್ಕನೇ ಬ್ಯಾಗನ್ನು ಇಟ್ರು! “ಹನ್ನೊಂದು ಹದಿಮೂರು” ಅಂತ ನನ್ನ ಬಸ್ ಪಾಸಿನ ನಂಬರ್ ಹೇಳಿ ಲೋಕೆಶಣ್ಣಂಗೆ ಎರಡು ರೂಪಾಯಿ ಕೊಟ್ಟೆ (ನಮ್ಮೂರಿನ ಆಗಿನ ಸ್ಟೂಡೆಂಟ್ ಪಾಸಿನ ವಿಶೇಷತೆ ಅಂದ್ರೆ ಬಸ್ ಚಾರ್ಜಿನಲ್ಲಿ 50% ರಿಯಾಯಿತಿ!). ಮುಂದೆ ಬರುವ ಇನ್ನೊಂದಷ್ಟು ಬಸ್ ಸ್ಟಾಪುಗಳಲ್ಲಿ ಮತ್ತೊಂದಷ್ಟು ಜನರನ್ನು ಬಸ್ಸಿಗೆ ತುಂಬಿಸುತ್ತಾ, ಹಾಗೆ ಹತ್ತಿದ ದಿನವೂ ಬಸ್ಸಿನಲ್ಲಿ ಸಿಗುವ ಸ್ನೇಹಿತರ ಜೊತೆಗೆ ನಿನ್ನೆಯ ಕ್ರಿಕೆಟ್ಟಲ್ಲಿ ಯಾರ್ಯಾರು ಹೆಂಗೆಂಗೆ ಆಡಿದ್ರೆ ಮ್ಯಾಚ್ ಗೆಲ್ತಿದ್ರು ಅಂತ ಮಾತಾಡ್ತಾ ಮಾತಾಡ್ತಾ ನಮ್ಮ ನಾರ್ವೆ ಶಾಲೆ ಬಂದೇ ಬಿಟ್ಟಿತ್ತು.
ಮೊದಲ ಪೀರಿಯಡ್ಡು ಗಣಿತ ಇದ್ದಿದ್ರಿಂದ ಶಾಲೆಗೆ ಹೋದವನೇ ಗಣಿತ ಹೋಂ ವರ್ಕ್ ಮಾಡ್ಬೇಕು ಅಂತ ಕ್ಲಾಸಲ್ಲಿದ್ದ ರಾಕೇಶನಿಗೆ ಅವನ ಹೋಂ ವರ್ಕ್ ಕೊಡು ಅಂದಾಗ “ಇವತ್ತು ನಾಗರತ್ನ ಟೀಚರ್ ಸ್ಕೂಲಿಗೆ ಬರಲ್ಲ ಕಣಾ, ನಾನೂ ಮಾಡಿಲ್ಲ ಹೋಂ ವರ್ಕ್. ಆಟ ಆಡಣ ಬಾ ಹೊರಗೆ ಹೋಗಿ” ಅಂತ ಹೊರಗೆ ಕರ್ಕೊಂಡು ಹೋದ. ನಾವು ಖುಷೀಲಿ ಹೊರಗೆ ಹೋಗಿ, ಕುಂಟ್ ಹಿಡಿಯೋ ಆಟ ಆಡಿ, ದಿನಾ ಬೆಳಗ್ಗೆ ಆಗ್ತಿದ್ದ ‘ನಾಡಗೀತೆ, ರಾಷ್ಟ್ರಗೀತೆ’ ಗಳ ಪ್ರೇಯರ್ ಮುಗಿಸಿ, ನಂ ಕ್ಲಾಸಿಗೆ ಹೋಗಿ ಕೂತ್ವಿ.
ಮೊದಲ ಪೀರಿಯಡ್ ತಗೋಳೋ ನಾಗರತ್ನ ಟೀಚರ್ ಬರ್ದೇ ಇದ್ದಿದ್ರಿಂದ ವಿಜ್ಙಾನದ ಶೈಲಾ ಟೀಚರ್ ಬಂದ್ರು. ಬಂದವರೇ ಹಾಜರಿ ಕರೆದು “ಒಬ್ಬೊಬ್ರೇ ಹೋಂ ವರ್ಕ್ ತಗೊಂಡು ಬಂದು ತೋರ್ಸಿ” ಅಂದಾಗ್ಲೇ ನೆನಪಾಗಿದ್ದು, ಗಣಿತದ ಜೊತೆಗೆ ವಿಜ್ಙಾನದ ಹೋಂ ವರ್ಕ್ ಬರೆಯೋಕೂ ಕೊಟ್ಟಿದ್ರು ಅಂತ! ನನ್ನ ಕೈಗಳು ‘ನಿನ್ನೆ ಬರೆಯದೇ ಇದ್ದಿದ್ದಕ್ಕೆ ಈಗ ಪೆಟ್ಟು ತಿನ್ನಬೇಕಲ್ಲ’ ಎಂಬ ಯೋಚನೆಯಲ್ಲೋ ಏನೋ, ಆಗಲೇ ಬೆವರಲು ಶುರು ಆಗಿತ್ತು.
– ಪ್ರಜ್ವಲ್ ಕುಮಾರ್