ಜಾಯಿಂಟ್ ಫ್ಯಾಮಿಲಿ = ಬೆಂಗಳೂರು
ಒಂದು ಊರು. ಅಲ್ಲಿ ಒಂದು ಜಾಯಿಂಟ್ ಫ್ಯಾಮಿಲಿ. ತುಂಬಾ ದೊಡ್ಡ ಮನೆ. ಮನೆಯಲ್ಲಿರುವವರಿಗೆ ಸಹಾಯ ಮಾಡುವ ಗುಣ ಸ್ವಲ್ಪ ಜಾಸ್ತೀನೆ. ನಮ್ಮ ಮನೆಗೆ ಒಳ್ಳೇ ಹೆಸರು ಬರಬೇಕು ಅಂತ, ಬೇರೆ ಊರಿಂದ ಏನೋ ಕೆಲಸದ ಮೇಲೆ ಈ ಊರಿಗೆ ಬರುವವರಿಗೆ ಉಳಿಯಲು ಜಾಗ ಇಲ್ಲ ಅಂತ ಗೊತ್ತಾಗಿ “ಇಲ್ಲೇ ಬನ್ನಿ” ಅಂತ ಆ ದೊಡ್ಡ ಮನೆಯಲ್ಲಿ ತಮ್ಮ ರೂಮನ್ನೇ ಬಿಟ್ಟು ಕೊಟ್ಟವರೆಷ್ಟೋ?!
ಅತಿಥಿ ದೇವೋ ಭವ!
ಆ ಬೇರೆ ಊರಿಂದ ಬಂದವರಲ್ಲಿ ಕೆಲವರು ಮಾತ್ರ ಈ ಮನೆಯನ್ನು ತನ್ನ ಸ್ವಂತ ಮನೆ ಅಂದುಕೊಂಡರು. ಉಳಿದ ಎಲ್ಲರಿಗೂ ಈ ಮನೆ ಒಂದೆರಡು ದಿನ ಇದ್ದು ಹೋಗುವ ಜಾಗವಾಯಿತಷ್ಟೇ. ಇದು ತನ್ನ ಸ್ವಂತ ಮನೆಯಲ್ಲ ಅಂದುಕೊಂಡವರಿಗೆ ಮನೆಯನ್ನು ಕೊಳಕು ಮಾಡುವುದರಲ್ಲಿ ಯಾವ ತಪ್ಪೂ ಕಾಣಲಿಲ್ಲ, ಮಾಡಿದರು!
ಈಗ ಇದ್ದಕ್ಕಿದ್ದಂತೆ ಪಕ್ಕದ ಊರಿನವರು “ಆ ಊರಲ್ಲಿ ಅದೊಂದು ಜಾಯಿಂಟ್ ಫ್ಯಾಮಿಲಿ ಮನೆ ಇದ್ಯಲ? ಅಲ್ಲಿಗೆ ಮಾತ್ರ ಹೋಗಬೇಡಿ, ಆ ಮನೆ ಸರಿ ಇಲ್ಲ, ಮನೆಯಲ್ಲಿ ಇರುವವರು ಸರಿ ಇಲ್ಲ.” ಅನ್ನೋಕೆ ಶುರು ಮಾಡಿದ್ರು.
ಮನೆ ಸರಿಯಿಲ್ಲ ಅನ್ನುವವರೆಲ್ಲರೂ ಈ ಮನೆಯನ್ನು ಸ್ವಂತದ್ದು ಅಂದುಕೊಳ್ಳದವರಷ್ಟೇ. ಈ ಮನೆಯ ನೆಂಟರಷ್ಟೇ.
ಮನೆಯನ್ನು ಸ್ವಂತದ್ದು ಅಂದುಕೊಂಡವರೆಲ್ಲರಿಗೂ ಗೊತ್ತಿದೆ, ಮನೆಯ ಕೆಲವು ಭಾಗ ಕೊಳಕಾಗಿದೆ ಅಷ್ಟೇ, ಅದನ್ನೂ ಸರಿ ಮಾಡಬಹುದು ಅಂತ.
ಊರು = ಕರ್ನಾಟಕ
ಜಾಯಿಂಟ್ ಫ್ಯಾಮಿಲಿ = ಬೆಂಗಳೂರು