ಬಾಲ್ಯ ಸ್ನೇಹಿತ
ನಾವೇನೂ ಮೂರು ಹೊತ್ತೂ ಒಟ್ಟಿಗೆ ಇರುತ್ತಾ ಇದ್ದ ಸ್ನೇಹಿತರಲ್ಲ. ಆದರೆ ಯಾವ ಹೊತ್ತಲ್ಲಿ ಸಿಕ್ಕಿದರೂ ಜಗಳ ಆಡಿದವರಲ್ಲ. ಕ್ರಿಕೆಟ್ ಅನ್ನೋ ಆಟವನ್ನ ಹೆಚ್ಚು ಕಡಿಮೆ ದಿನಾ ಆಡ್ತಾ ಇದ್ವಿ ಅಲ್ವನೋ? ನನಗೂ ನಿನಗೂ ವಯಸ್ಸಲ್ಲಿ ಬರೀ ಮೂರ್ನಾಲ್ಕು ತಿಂಗಳುಗಳ ಅಂತರವಿದ್ದಿದ್ದರಿಂದಲೋ ಏನೋ ನಮ್ಮ ಯೋಚನೆಗಳು ಒಂದೇ ದಿಕ್ಕಿನಲ್ಲಿರುತ್ತಿದ್ದವು. ನಿನಗೂ ಗೊತ್ತು, ನಮಗಿಂತ ಮೊದಲು ನಿನ್ನ ಮತ್ತು ನನ್ನ ಅಪ್ಪ ಸ್ನೇಹಿತರು. ಯಾವಾಗಲೋ ಒಮ್ಮೆ ನಿಮ್ಮ ಅಪ್ಪ ನಮ್ಮ ಅಪ್ಪನ ಬಳಿ ಹೇಳಿದ ನೆನಪು “ನಮ್ಮಿಬ್ಬರ ಥರಾನೆ ನಮ್ಮ ಮಕ್ಕಳೂ ಸ್ನೇಹಿತರು ನೋಡು” ಅಂತ. ಅದೇ ಥರ ಇದ್ವಿ ತಾನೆ ನಾವು? ಈಗ ಹೇಳ್ದೆ ಕೇಳ್ದೆ ಹಿಂಗೆ ಮಾಡಿ ಬಿಟ್ರೆ?
ಅವೆಲ್ಲ ಇರಲಿ, ಇಷ್ಟು ಬೇಗ ಹೋಗೋ ಆತುರ ಏನಿತ್ತು ನಿಂಗೆ? ನಿಮ್ಮ ಮನೆಯವರ ಸ್ಥಿತಿಯನ್ನ ನಮ್ಮ ಅಮ್ಮ, ಅಪ್ಪ ಹೇಳುತ್ತಿದ್ದಾಗ, ಬಂದು ನಿನ್ನ ಕೆನ್ನೆ ಮೇಲೆ ನಾಲ್ಕು ಬಾರಿಸಿ, ಕೈ ಹಿಡಿದು ಎಳ್ಕೊಂಡು ಬರೋಣ ಅನಿಸುತಿತ್ತು. ಕಾಲಿಗೆ ಬಿದ್ದು “ತಿರುಗಿ ಬಾ” ಅಂತ ಕೇಳೋಣ ಅನಿಸುತಿತ್ತು. ಆದರೆ ನೀನು ಬಹಳ ಬುದ್ಧಿವಂತ. ನನ್ನ ಕೈಗೆ ಸಿಗಲೇ ಇಲ್ಲ.
ನಿನ್ನ ಆ ನಗು, ಬೇರೆಯವರನ್ನು ಛೇಡಿಸುತ್ತಿದ್ದ ಆ ಮುಖ, ಎತ್ತರದ ಕಡ್ಡಿ ದೇಹ, ಈಗಲೂ ಈ ಕಣ್ಣ ಮುಂದಿದೆ, ಯಾವಾಗಲೂ ಇರುತ್ತೆ.
ನೀನು ಇಲ್ಲ ಅನ್ನೋದನ್ನ ನಾನಂತೂ ನಂಬೋಲ್ಲ. ಇನ್ನು ಮೇಲೆ ನಿಮ್ಮ ಮನೆಯವರಿಗೆ ಯಾವ ಕಷ್ಟಾನೂ ಬರದೆ ಇರೋ ಥರ ನೋಡ್ಕೋ. ” ನಾನು ಅವರ ಕಣ್ಣಿಗೆ ಕಾಣೋದೇ ಇಲ್ಲ “, ” ನಂಗೆ ಅವರನ್ನ ಮಾತಾಡ್ಸೋಕೆ ಆಗಲ್ಲ ” ಅಂತೆಲ್ಲ ಕಾರಣ ಕೊಟ್ರೆ ಖಂಡಿತ ಬಂದು ನಿನ್ನ ಕೈ ಮುರೀತೀನಿ.
ಬಾಲ್ಯ ಸ್ನೇಹಿತನ ಅಗಲಿಕೆ ಸಹಿಸೋದು ಇಷ್ಟೊಂದು ಕಷ್ಟ ಅಂತ ಗೊತ್ತಿರಲಿಲ್ಲ. ಇದಿಷ್ಟೂ ನೀನು ಓದಿದೀಯ ಅನ್ನೋದು ನನಗೂ ಗೊತ್ತು ನಿನಗೂ ಗೊತ್ತು. ಆದಷ್ಟು ಬೇಗ ನಮ್ಮೆಲ್ಲರ ಕಣ್ಣಿಗೆ ಕಾಣೋ ರೂಪದಲ್ಲಿ ಮತ್ತೊಮ್ಮೆ ಬಾ. ಕಾಯ್ತಾ ಇರ್ತೀವಿ.