ಬಸ್ ಕೆರೆತ !
ಮೂರು ವರ್ಷದ ಹಿಂದೆ ಹಿಂಗೊಂದು ಘಟನೆ ಆಗಿತ್ತು ಅಂತ ಫೇಸ್-ಬುಕ್ ಅಲ್ಲಿ ಬರ್ದಿದ್ದೆ!
~~~~
ಕೆಲವ್ರಿಗೆ ಬೈಬೇಕೋ, ಮೆಟ್ಟು ತಗೊಂಡು ಹೊಡೀಬೇಕೋ ಗೊತಾಗಲ್ಲ!!
ಇವತ್ತು ಬೆಳ್ಗೆ ಬಸ್ಸಲ್ಲಿ ಸದಾಶಿವನಗರದ ಕಡೆಯಿಂದ ಮೆಜೆಸ್ಟಿಕ್ಕಿಗೆ ಬರ್ಬೇಕಾದ್ರೆ ಪಕ್ಕದಲ್ಲಿ ಯಾರೋ ಒಬ್ಬ ಬಂದು ಕೂತ(ಆತ ನಂಗಿಂತ ಐದಾರು ವರ್ಷ ದೊಡ್ಡವ್ನಾಗಿದ್ರೂ ಬಹುವಚನ ಉಪಯೋಗಿಸಬೇಕು ಅನ್ನಿಸ್ತಿಲ್ಲ !!).
ಕೂರ್ತಿದ್ದ ಹಾಗೇ ಮೊಬೈಲ್ ತೆಗೆದು ತಮಿಳಿನಲ್ಲಿ ಜೋರಾಗಿ ಮಾತಾಡೋಕೆ ಶುರು ಮಾಡ್ದ.
ಅವ್ನು ಮಾತಾಡೋ ರೀತಿ ನೋಡಿದ್ರೆ ಅವ್ನು ಸುಮ್ನೆ ಕರೆನ್ಸಿ ವೇಷ್ಟ್ ಮಾಡ್ತಿದ್ದ ಅನ್ನಿಸ್ತು, ಸುಮ್ನೆ ಒಂದು ಮಿಸ್ ಕಾಲ್ ಕೊಟ್ಟು ಮಾತಾಡಿದ್ರೆ ಸಾಕಿತ್ತು. ಆಚೆ ಇರೋವ್ರಿಗೆ ಅವರು ‘ಹಿಮಾಲಯದಲ್ಲಿ’ ಇದ್ರೂ ಕೇಳ್ಬೇಕು, ಅಷ್ಟು ಜೋರಾಗಿ ಕೂಗ್ತಿದ್ದ. ಒಂದು ಹತ್ತು ನಿಮಿಷ ಹಾಗೇ ಕೂಗಿ ಫೋನ್ ಕೆಳಗಿಟ್ಟ.
ಸಧ್ಯ ಮುಗೀತು ಅನ್ಕೊಂಡ್ರೆ ಆಮೇಲೆ ಅವನ ಕೈಯಲ್ಲಿ ಒಂದಷ್ಟು ಸೆಂಟೀಮೀಟರ್ ಉದ್ದ ಬಂದಿರೋ ಉಗುರಿನಿಂದ ಎದುರುಗಡೆಗೆ ಇದ್ದ ಸೀಟಿನ ಹಿಂದೆ ಅದೇನೋ ಗೀಚೋಕೆ ಶುರು ಮಾಡ್ದ!
ನಾನು “ಸುಮ್ನೇ ಯಾಕೆ ಉಗುರು ಪೆಟ್ಟು ಮಾಡ್ಕೋತೀರ? ತಗೋಳಿ ಈ ಪೆನ್ನು ಚೆನಾಗಿ ಬರೆಯುತ್ತೆ” ಅಂತ ಹೇಳಿ ನನ್ ಪೆನ್ನು ತೆಗ್ದು ಅವನ ಕೈಗೆ ಕೊಟ್ಟೆ.
“ಪರ್ವಾಗಿಲ್ಲ ಸಾರ್” ಅಂತ ಅವ್ನ ಬಾಯಲ್ಲಿ ಇರೋ ಹಲ್ಲುಗಳನ್ನೆಲ್ಲಾ ತೋರ್ಸಿ ಆಚೆ ತಿರುಗಿ ಕೂತ, ಮುಂದಿನ ಸ್ಟಾಪಲ್ಲಿ ಎದ್ದು ಹೋದ, ಬಸ್ಸು ಇಳ್ಕೊಂಡು ಹೋದ್ನೋ? ಬೇರೆ ಕಡೆ ಹೋಗಿ ‘ಕೆರೀತಾ’ ಕೂತ್ಕೊಂಡ್ನೋ? ರಶ್ ಅಲ್ಲಿ ಗೊತಾಗಿಲ್ಲ.
ಈ ಬಿ.ಎಂ.ಟಿ.ಸಿ., ಕೆ.ಎಸ್.ಆರ್.ಟಿ.ಸಿ. ಅವರು ಎಷ್ಟೇ ಒಳ್ಳೇ ‘ಏ.ಸಿ.’ ಬಸ್ಸು ಕೊಟ್ರೂ ಒಸಿ ‘ಓಸಿ’ ಜಾಗ ಇದೆ, ನಮ್ ಹೆಸ್ರು ಸೇರ್ಸಿಬಿಡೋಣ ಅಂತ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಅನ್ನೋ ಹಾಗೆ ‘ಕೆರೆದ ಬಸ್ಸನು, ಕೆರೆದು ಹಾಕಿ’ ಅಂತ ಮತ್ತೆ ಮತ್ತೆ ‘ಪರಾ ಪರಾ’ ಅಂತ ಕೆರೆಯುವವರಿಗೆ ‘ಶೂಟ್ ಮಾಡ್ಬೇಕಾ?’ ಅನ್ನೋವ್ರು ಯಾರೂ ಇಲ್ಲವಾಗಿದ್ದಾರೆ !