ಮಳೆಗಾಲದ ಮಲೆನಾಡು

Maleegaalada Malenaadu

ಚಿಕ್ಕವನಿದ್ದಾಗ ನನ್ನ ಪಾಲಿಗೆ ಮಳೆಗಾಲ ಶುರು ಆಗ್ತಿದ್ದಿದ್ದು ಮನೆಯ ಪಕ್ಕ, ಮನೆಗಿಂತಲೂ ಎತ್ತರ ಇರೋ ಮಣ್ಣಿನ ಧರೆಯ ಮಣ್ಣು ಜರಿದು, ಅದರ ಕೆಳಗಿರುವ ನೀರಿನ ಕಾಲುವೆ ಮುಚ್ಚಿದಾಗ. ಜರಿದ ಮಣ್ಣನ್ನು ತೆಗೆದು ಕಾಲುವೆಯಲ್ಲಿ ನೀರು maleegaalada-malenaaduಹೋಗುವಂತೆ ಮಾಡದಿದ್ದರೆ, ಕಾಲುವೆಯ ನೀರೆಲ್ಲಾ ಮನೆಯ ಅಂಗಳಕ್ಕೆ ಬರುತ್ತಿತ್ತು. ಅಪ್ಪ ಹಾರೆ, ಗುದ್ದಲಿ ಜೊತೆಗೆ ಕಾಲುವೆಯ ಮಣ್ಣು ತೆಗೆಯಲು ಹೊರಟರೆ ನಾನೂ ಅಪ್ಪನೊಟ್ಟಿಗೆ ಏನೋ ಬಹಳ ಕೆಲಸ ಮಾಡುವವನ ಥರ ಹೋಗ್ತಿದ್ದೆ. ಆದರೆ ನನಗೆ ಬೇಕಾಗಿದ್ದಿದ್ದು ನೀರು, ಮಣ್ಣಿನ ಜೊತೆಗೆ ಆಡೋ ಆಟ ಮತ್ತು ನನ್ನ ಸೈಜಿನ ಚಿಕ್ಕ ರೈನ್-ಕೋಟ್ ಹಾಕಿಕೊಳ್ಳೋಕೆ ಒಂದು ನೆಪ ಅಷ್ಟೇ.

ಮಳೆಗಾಲದಲ್ಲಿ ಛತ್ರಿಯಿಲ್ಲದೇ ಮಲೆನಾಡಲ್ಲಿರೋದು, ಕೆಲಸವಿಲ್ಲದೇ ಬೆಂಗಳೂರಲ್ಲಿರೋದು ಎರಡೂ ಒಂದೇ!

ಮಲೆನಾಡಲ್ಲಿ ಕರೆಂಟು, ಕಾಫಿ ಮತ್ತು ಅಡಿಕೆಯಷ್ಟೇ ಅಮೂಲ್ಯವಾದ ಇನ್ನೊಂದು ವಸ್ತುವೆಂದರೆ ‘ಛತ್ರಿ’. ಮಳೆಗಾಲದಲ್ಲಿ ಛತ್ರಿಯಿಲ್ಲದೇ ಮಲೆನಾಡಲ್ಲಿರೋದು, ಕೆಲಸವಿಲ್ಲದೇ ಬೆಂಗಳೂರಲ್ಲಿರೋದು ಎರಡೂ ಒಂದೇ! ಮಳೆಯ ಜೊತೆಗೆ ಆಗಾಗ ಬೀಸೋ ಜೋರು ಗಾಳಿಗೆ ಶಾಲೆಯಲ್ಲಿ ಒಬ್ಬರದಾದರೂ ಛತ್ರಿ ಡಿಶ್-ನಂತೆ ಉಲ್ಟಾ ಆಗ್ತಿತ್ತು. ಅದನ್ನ ಸರಿ ಮಾಡೋ ಭರದಲ್ಲಿ ಛತ್ರಿಯ ಕಡ್ಡಿ ಮುರಿದು ಹೋಗೋದು ಕಾಮನ್ ಆಗಿದ್ರಿಂದ ಛತ್ರಿ ರಿಪೇರಿ ಮಾಡುವವರಿಗೂ ಮಳೆಗಾಲದಲ್ಲಿ ಬಹಳ ಬೇಡಿಕೆ ಇದ್ದಿದ್ದೇ. ಪ್ರತಿ ವರ್ಷವೂ ಒಂದೋ ಎರಡೋ ಛತ್ರಿಯನ್ನು ಬಸ್ಸಿನಲ್ಲೋ, ಶಾಲೆಯಲ್ಲೋ ಕಳೆದುಕೊಂಡು ಬರ್ತಿದ್ದಿದ್ದು ನನ್ನ ಆಗಿನ ಅಪರಾಧಗಳಲ್ಲೊಂದು.

ಏಳನೇ ಕ್ಲಾಸಿನ ತನಕ ಚಡ್ಡಿ ಹಾಕ್ಕೊಂಡು ಶಾಲೆಗೆ ಹೋಗ್ತಿದ್ದ ನನಗೆ ಎಂಟನೇ ಕ್ಲಾಸಿಗೆ ಪ್ಯಾಂಟ್ ಹಾಕ್ಕೊಳೋ ಭಾಗ್ಯ. ಆಗ ಬಹುಷಃ ಚಡ್ಡಿಯಿಂದ ಪ್ಯಾಂಟಿಗೆ ಪ್ರಮೋಷನ್ ಸಿಗುತ್ತೆ ಅನ್ನೋದೆ ಹೈಸ್ಕೂಲಿಗೆ ಹೋಗೋ ಸಂಭ್ರಮಗಳಲ್ಲಿ ಮೊದಲಿತ್ತು. ಆದರೆ ಮಳೆಗಾಲದಲ್ಲಿ ಎಷ್ಟೇ ಕಷ್ಟ ಪಟ್ಟರೂ ಗಂಟಿನವರೆಗೆ ಒದ್ದೆಯಾಗುತ್ತಿದ್ದ ಪ್ಯಾಂಟಿಗಿಂತ ಚಡ್ಡಿಯೇ ವಾಸಿಯಾಗಿತ್ತು ಅನಿಸಿದ್ದು ಸುಳ್ಳಲ್ಲ. ದಿನವೂ ಕೆಸರಾಗುತ್ತಿದ್ದ ಪ್ಯಾಂಟನ್ನು ತೊಳೆದು ಒಣಗಿಸೋದು ಅಮ್ಮನ ಕಷ್ಟದ ಕೆಲಸಗಳಲ್ಲೊಂದು. ಬಿಸಿಲೇ ಕಾಣದ ಮಳೆಗಾಲದಲ್ಲಿ, ಒಲೆಗೆ ಬೆಂಕಿ ಹಾಕಿ, ಬೆಂಕಿಯ ಶಾಖ ಬಟ್ಟೆಗೆ ತಾಗುವಂತೆ ಒಲೆಯ ಮುಂದೆ ಬಟ್ಟೆ ಇಟ್ಟು ಒಣಗಿಸುವುದೇ ದಾರಿ. ಮಳೆಗಾಲದ ಚಳಿಗೆ ಒಲೆಯ ಮುಂದೆ ಕೂತು ಚಳಿ ಕಾಯಿಸುವುದು ಎಲ್ಲರೂ ಮಾಡಿರುವ, ಮಾಡುವ ಕೆಲಸ. ನಮ್ಮ ಜೊತೆ ನಮ್ಮ ಒದ್ದೆ ಬಟ್ಟೆಗೂ ಒಲೆಯ ಮುಂದೆ ಕೂರುವ ಸುಯೋಗ.

ಸುಮ್ಮನೆ ಕುಣಿಯೋ ಮಕ್ಕಳಿಗೆ ಕೆಸರಲ್ಲಿ ಕುಣೀರಿ ಅಂದ್ರೆ ಏನಾಗುತ್ತೆ? ಎದ್ದು, ಬಿದ್ದು ಬಟ್ಟೆಯೆಲ್ಲಾ ಕೆಸರಾಗುತ್ತೆ.

ಆಗೆಲ್ಲ ಬೇರೆ ಶಾಲೆಗಳ ಜೊತೆ ನಡೆಯುವ ಕಾಂಪಿಟೇಷನ್ನುಗಳಲ್ಲಿ ‘ಕ್ರೀಡಾಕೂಟ’ ಮೊದಲು ಶುರುವಾಗೋದು. ವಲಯ, ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟಗಳು ಒಂದು-ಎರಡು ದಿನ ಇದ್ರೂ, ಅದಕ್ಕೆ ಬೇಕಾದ ಪ್ರಾಕ್ಟೀಸ್ ಮಾತ್ರ ದಿನವೂ ಎಲ್ಲಾ ಶಾಲೆಗಳಲ್ಲಿ ಇದ್ದಿದ್ದೇ. ಈ ಕ್ರೀಡಾಕೂಟ ಹೆಚ್ಚಾಗಿ ಮಳೆಗಾಲದಲ್ಲೇ ಇರೋದ್ರಿಂದ, ಮಳೆಯಲ್ಲಿ ನೆನೀತಾನೆ ಖೋ ಖೋ, ಕಬಡ್ಡಿ, ವಾಲಿಬಾಲ್ ಥರದ ಆಟಗಳ ಪ್ರಾಕ್ಟೀಸ್ ಆಗ್ತಿತ್ತು. ಸುಮ್ಮನೆ ಕುಣಿಯೋ ಮಕ್ಕಳಿಗೆ ಕೆಸರಲ್ಲಿ ಕುಣೀರಿ ಅಂದ್ರೆ ಏನಾಗುತ್ತೆ? ಎದ್ದು, ಬಿದ್ದು ಬಟ್ಟೆಯೆಲ್ಲಾ ಕೆಸರಾಗುತ್ತೆ. ಈ ರೀತಿಯಾಗಿ ಎಲ್ಲರ ಮನೇಲಿ ಒಲೆಗೆ ಬೆಂಕಿ ಹಾಕಿ ಬಟ್ಟೆ ಒಣಗಿಸೋ ಕೆಲಸ ಜಾಸ್ತಿ ಆಗ್ತಿತ್ತು.

ರೋಡಿನ ಬದಿಯಲ್ಲೇ ಹರಿಯೋ ಹೊಳೆ, ಹಳ್ಳಗಳ ನೀರು ಹೆಚ್ಚಾಗಿ; ರೋಡಿನ ಮೇಲೆ ಬಸ್ಸುಗಳೂ ಓಡಾಡದಂತೆ ಅಪಾಯಕಾರಿಯಾಗಿ ಹರಿಯಲು ಶುರು ಮಾಡಿದ ದಿನ ಶಾಲೆಗೆ ರಜೆ! ಹಾಗಾಗಿ ದಿನವೂ ಹೊಳೆ, ಹಳ್ಳ ರೋಡಿನ ಮೇಲೆ ಬರೋಕೆ ಇನ್ನೆಷ್ಟು ನೀರು ಬೇಕು ಅಂತ ನೋಡುತ್ತಾ ಇನ್ನೂ ಜೋರು ಮಳೆ ಬರ್ಲಿ ಅಂತ ಕೇಳ್ಕೊಳ್ಳೋದೆ ನಂ ಕೆಲಸ ಆಗಿತ್ತು.

ಮಲೆನಾಡಿನ ಮಳೆಗಾಲದ ಇನ್ನೊಂದಿಷ್ಟು ಮುಖ್ಯಾಂಶಗಳು :

  • ಕೆಸರು, ಪಾಚಿಯಿಂದ ಜಾರಿ ಬಿದ್ದು ಆಗೋ ಪೆಟ್ಟು.
  • ಒದ್ದೆಯಾಗಿ ಒಣಗದ ಚಪ್ಪಲಿಯಿಂದ ಕ್ಲಾಸಲ್ಲಿ ಕೂತಾಗ ಬರೋ ಕೆಟ್ಟ ವಾಸನೆ.
  • ಎಷ್ಟೇ ಬಂದೋಬಸ್ತು ಮಾಡಿದ್ರೂ ಅಧ್ಹೆಂಗೋ ಬ್ಯಾಗಿನ ಒಳಗೆ ಹೋದ ನೀರಿಂದ ಒದ್ದೆಯಾಗೋ ಪುಸ್ತಕ.
  • ಎಷ್ಟೇ ಸಲ ನೋಡ್ಕೊಂಡ್ರೂ ಸಿಗದಂತೆ ಯಾವುದೋ ಸಂದೀಲಿ ಕೂತು ರಕ್ತ ಹೀರುವ ಇಂಬಳ.
  • ಅದೆಲ್ಲೋ ಲೈನಿನ ಮೇಲೆ ಮರ ಬಿದ್ದು, ವಾರಗಟ್ಟಲೆ ಬರದೇ ಇರೋ ಕರೆಂಟು.
  • ಏನೇ ಮಾಡಿದರೂ ಮನೆ ಒಳಗೆಲ್ಲಾ ಆಗೋ ಕಾಲಿಗೆ ಹಿಡಿದ ಕೆಸರು.

ಒಟ್ಟಿನಲ್ಲಿ ಮಳೆಗಾಲವನ್ನು ಅನುಭವಿಸಬೇಕು ಅಂದ್ರೆ ಮಲೆನಾಡಲ್ಲಿರ್ಬೇಕು 🙂

Listen to the audio version of Maleegaalada Malenaadu 🙂

You may also like...

4 Responses

  1. Kavya bhat says:

    ನಿಜ .. ಬಾಲ್ಯದ, ಮಲೆನಾಡಿನ ಆ ಮಳೆಗಾಲದ ಖುಷಿಯೇ ಬೇರೆ … ಒಮ್ಮೆ ಎಲ್ಲಾ ನೆನಪಿಸಿದ್ದಕ್ಕೆ ಜೈ ಹೋ …. 😊

  2. Bindya Kannappa Setty says:

    Hi Prajwal, love your blog. I wanted to contact you regarding work and I can’t seem to find a contact. So let me know how I can get in touch with you. Thanks!

  3. Hi Bindya,
    Sorry that you could not find a contact and also for the late reply. Will work on it.
    You can write to me at [email protected]

Leave a Reply

Your email address will not be published. Required fields are marked *