ಗಿಳಿರಾಯ
ಮಳೆರಾಯನಾರ್ಭಟಕೆ ಸಿಕ್ಕನೋ ಗಿಳಿರಾಯ
ಕಂದನಿಗಾಹಾರ ತರುತಲಿರುವಾಗ
ಆಗಿದೆ ಕಾಲಿನಾ ಬುಡದಲ್ಲಿ ಗಾಯ
ಹಾರುವುದಕದರಿಂದ ತೊಂದರೆಯು ಈಗ
ಕಂದನಾ ನೆನೆಯುತಿರೆ ನೋವೆಲ್ಲ ಮಾಯ
ಕತ್ತಲಾ ಸೆರಗಲಿ ಇಮ್ಮಡಿಸಿದೆ ವೇಗ
ಇತ್ತಕಡೆ ಮರಿ ಗಿಳಿಗೆ ಗುಡುಗು-ಸಿಡಿಲಿನಾ ಭಯ
ಮೈಯೆಲ್ಲ, ಗೂಡೆಲ್ಲ ಒದ್ದೆಯಾ ಭಾಗ
ಮಿಂಚೊಂದು ಹೊಂದಿದೆ ಅಂಕು-ಡೊಂಕು ಮೈಯ್ಯ
ಗಿಳಿಗೂಡ ಸವರಿತು ತನ್ನಯ ತರಂಗ
ತಲುಪಿದನು ತನ ಗೂಡ ನಮ್ಮ ಗಿಳಿರಾಯ
ಗೂಡು, ಕಂದಗಳೆರಡು ನೆಲದಲ್ಲಿ ಲಾಗ
ಎತ್ತುತಾ ಕಂದನಾ, ಮೀರದೆಯೇ ಸಮಯ
ಹೊರಟನು ಗಿಳಿರಾಯ ಹುಡುಕುತ್ತ ಜಾಗ
ಇದಕಂಡು ಮರುಗಿದನೋ ಜಡಿಯ ಮಳೆರಾಯ
ಹಾಡುವುದ ನಿಲ್ಲಿಸಿದ ತನ್ನಯಾ ರಾಗ
ಇಲ್ಲಿಗೇ ಮುಗಿಸಿದಳು ಅಜ್ಜಿಯೂ ಕಥೆಯ
ಮೊಮ್ಮಗಳ ನಿದ್ದೆಗೆ ಇನ್ನಿಲ್ಲ ಭಂಗ