“ಜೀವಿಗಳು” – ಒಂದು ಕಥೆ

jeevigalu
“ನಿನ್ನೆ ರಾತ್ರಿ ಅರ್ಜೆಂಟ್ ಆಯ್ತು ಅಂತ ಟಾಯ್ಲೆಟ್ ಗೆ ಹೋದೆ.”
“ಟಾಯ್ಲೆಟ್ ಗೆ ಅರ್ಜೆಂಟ್ ಆದಾಗ ಹೋಗದೆ ನಿದ್ದೆ ಬಂದಾಗ ಹೋಗ್ತಾರ?”
“ಅಲ್ಲಿ ನನ್ನ ಕೆಲಸ ಎಲ್ಲಾ ಮುಗಿದ ಮೇಲೆ ಬಾಗಿಲು ತೆಕ್ಕೊಂಡು ಹೊರಗೆ ಬಂದೆ.”
“ಎಲ್ಲಾ ಮುಗಿದ ಮೇಲೆ ಹೊರಗೆ ಬರದೆ ಟಾಯ್ಲೆಟ್ ಅಲ್ಲೇ ಮಲಗ್ತಾರಾ ಯಾರಾದ್ರು? ತಲೆ ಸರಿ ಇದ್ಯ ನಿಂಗೆ?”
“ಲೇಯ್! ಏನಾಯ್ತು ಅಂತ ಹೇಳೋಕೆ ಬಿಡ್ತೀಯಾ ಇಲ್ವಾ?”
“ಬಿಡಲ್ಲ. ಏನಿವಾಗ?”
“ಹಾಳಾಗ್ ಹೋಗು! ನಾನ್ ಹೇಳ್ತೀನಿ. ಬೇಕಾದ್ರೆ ಕೇಳಿಸ್ಕೋ, ಬೇಡಾಂದ್ರೆ ಇದೇ ರೀತಿ ಉಲ್ಟಾ ಮಾತಾಡ್ತಾ ಇರು”
“ಸುಮ್ನೆ ಕೊರೀಬೇಡ. ಮುಂದೆ ಹೇಳು ಮಾರಾಯ”
“ಬಾಗಿಲು ತೆಕ್ಕೊಂಡು ಹೊರಗಡೆ ಬರ್ತೀನಿ ಐದಾರು ಮೆಟ್ಟಿಲು ಎದುರಿಗೆ”
“ಥೋ! ಅದರಲ್ಲಿ ಏನಿದೆ ವಿಶೇಷ?”
“ಮಂಗ ಮುಂಡೇದೆ! ನಮ್ಮನೆ ಟಾಯ್ಲೆಟ್ ಎದುರಿಗೆ ಮೆಟ್ಟಿಲು ಎಲ್ಲೋ ಇದೆ?”
“ಅರೇ! ಹೌದಲ್ವ?”
“ಹೂಂ ಮತ್ತೆ. ಹಾಳಾದ್ದು ಆಗಲೇ ಕರೆಂಟ್ ಹೋಗ್ಬೇಕಾ? ಕೈಯಲ್ಲಿ ಟಾರ್ಚ್ ಬೇರೆ ಇಲ್ಲ.”
“ಮೈಯೆಲ್ಲಾ ಒಂದು ಸಲ ಜುಂ ಅಂತೇನೋ ಅಲ್ವ? ಬೆಳ್ಳಗೆ ಯಾವ್ದಾದ್ರು ಮೋಹಿನಿ ಕಂಡ್ಲ?”
“ಹೂಂ! ಜಯಂತಿ, ‘ತಂಗಾಳಿಯಲ್ಲಿ ನಾನು’ ಅಂತ ಹೋಗ್ತಾ ಇದ್ಲು. ಥೂ! ಕೇಳ ಮುಂದೆ. ಆ ಮೆಟ್ಟಿಲು ಇಳಿದು ಕೆಳಗೆ ಹೋದೆ. ತಕ್ಷಣ ಆ ಮೆಟ್ಟಿಲು ಮೇಲ್ಗಡೆ ಏನೋ ಶಬ್ದ ಆಯ್ತು. ಏನು ಅಂತ ತಿರುಗೋದ್ರೊಳಗೆ ಛಕ್ ಅಂತ ಬೆಳಕು”
“ಛಕ್ ಅಂತ ಶಬ್ದಾನು ಬಂತ ಅಥವಾ ಬರೀ ಬೆಳಕು ಮಾತ್ರ ಬಂತಾ?”
“ಶಬ್ದಾನು ಬಂತು ಕಣೋ! ಮೊದ್ಲು ಕರೆಂಟ್ ಬಂತು ಅನ್ಕೊಂಡೆ, ನೋಡಿದ್ರೆ ಕಣ್ಣು ಬಿಡೋಕೆ ಆಗ್ತಿಲ್ಲ. ಎಂಟ್ಹತ್ತು ಲಾರಿ ಎದುರಿಗೆ ನಿಲ್ಲಿಸ್ಕೊಂಡು  ಹೆಡ್ ಲೈಟ್ ಆನ್ ಮಾಡಿರೋ ಅಷ್ಟು ಬೆಳಕು ಇತ್ತು. ಬರೀ ಒಂದು ಕಡೆ ಅಲ್ಲ, ಸುತ್ತಲೂ!”
“ಆಮೇಲೆ?”
“ನಂಗೆ ಒಂದು ಸಲ ಏನಾಗ್ತಿದೆ ಅಂತಾನೆ ಗೊತ್ತಾಗ್ಲಿಲ್ಲ. ಕೃಷ್ಣ, ರಾಮ, ಅಲ್ಲಾ, ಈಶ್ವರ, ಏಸು, ಬುದ್ಧ ಎಲ್ಲಾರ್ನು ಕರೆದೆ. ಯಾರು ಬರ್ಲೇ ಇಲ್ಲ!”
“ಸಂಕಟ ಬಂದಾಗ ವೆಂಕಟರಮಣ! ಅವರನ್ನ ಕರೆದ್ಯಾ?”
“ಅವರೊಂದು ನೆನಪಾಗಿಲ್ಲ ನೋಡು! ಅಷ್ಟೊತ್ತಿಗೆ ಬೆಳಕಿಗೆ ನನ್ನ ಕಣ್ಣು ಅಡ್ಜಸ್ಟ್ ಆಗಿತ್ತು ಅನ್ಸುತ್ತೆ, ಒಂದೊಂದೇ ವಸ್ತುಗಳು ಕಾಣೋಕೆ ಶುರು ಆಯ್ತು”
“ಏನು ಕಾಣಿಸ್ತು?”
“ಮೊದ್ಲು ಸುತ್ತಲೂ ವೈರುಗಳು, ಕಂಪ್ಯೂಟರ್ ಥರದ್ದೇ ದೊಡ್ಡ ದೊಡ್ಡ ಮೆಷೀನುಗಳು ಕಂಡ್ವು.”
“ರಜನಿಕಾಂತ್ ಫಿಲಂ ಅಲ್ಲಿ ಇದ್ದಂಗೆ! ಆಮೇಲೆ?”
jeevigalu
“ಒಂಥರಾ ಹಂಗೆ ಇತ್ತು! ಬರೀ ಮೆಷೀನುಗಳು ಅನ್ಕೊಂಡ್ರೆ ನಾಕೈದು ಜನ ಕಂಡ್ರು, ಥೋ! ಜನ ಅಲ್ಲ, ಜೀವಿಗಳು!!”
“ಅನ್ಯ ಲೋಕದವ್ರಾ?”
“ಇರಬೇಕು! ಮನುಷ್ಯರ ಥರಾನೇ ಇದ್ವು, ಆದ್ರೆ ತಲೇನೇ ಇರ್ಲಿಲ್ಲ!”
“ಆಂ!”
“ಹೌದೋ. ಒಂಥರಾ ಬಿಳೀ ಬಟ್ಟೆ ಮೇಲೆ ಪೆನ್ಸಿಲ್ ಅಲ್ಲಿ ಗೀಚಿರೋ ರೀತಿ ಬಟ್ಟೆ ಹಾಕ್ಕೊಂದಿದ್ವು. ಅದು ಬಟ್ಟೆನಾ ಅಥವಾ ಅದರ ಮೈ ಇರೋದೇ ಆ ರೀತಿನಾ ಗೊತ್ತಾಗ್ಲಿಲ್ಲ!”
“ಆಮೇಲೆ? ಅವೇನಾದ್ರೂ ಮಾಡಿದ್ವಾ?”
“ಅವು ಒಂದು 25 – 30 ಅಡಿ ದೂರದಲ್ಲಿ ಇದ್ವು. ಅದೇ ಸಮಯದಲ್ಲಿ ನಾನು ಎಲ್ಲಿದೀನಿ ನೋಡಿ ಬಿಡೋಣ ಅಂತ ಮೇಲೆ, ಕೆಳಗೆ, ಸುತ್ತಲೂ ನೋಡಿದೆ”
“ಏನಿತ್ತು?”
“ಅದು ಆ ಜೀವಿಗಳ ವಾಹನ ಇರ್ಬೇಕು. ಆದ್ರೆ ಹಾರುವ ತಟ್ಟೆ ಥರ ಇರ್ಲಿಲ್ಲ, ಬದಲಿಗೆ ಕೋನ್ ಐಸ್ ಕ್ರೀಮ್ ಥರ ಇತ್ತು. ಹಿಂದೆ ತಿರುಗಿ ನೋಡ್ತೀನಿ ನಾನು ನಿಂತಿದ್ದ ಜಾಗಾನೆ ವಾಹನದ ತುದಿ!”
“ಹೊರಗೆ ಬಂದ್ಯಾ ಕೂಡ್ಲೇ?”
“ಇಲ್ಲ! ಸುಮ್ನೆ ಆ ಜೀವಿಗಳು ಇದ್ದ ಕಡೆ ನೋಡೋಣ ಅಂತ ತಿರುಗ್ತೀನಿ ನನ್ ಎದುರಿಗೇ ಬಂದು ನಿಂತಿವೆ ಎರಡು ಜೀವಿಗಳು! ಒಂದರ ಕೈಯಲ್ಲಿ ಕತ್ತರಿ ರೀತೀದೆ ಒಂದು ವಸ್ತು ಮತ್ತೆ ಕುಕ್ಕರ್ ಥರದ್ದು ಒಂದು ಪಾತ್ರೆ ಇತ್ತು”
“ಆಮೇಲೆ?”
“ನಂಗೆ ಹೆದರಿಕೆ! ನನ್ನ ತಲೇನೂ ಕತ್ತರಿಸಿ ಅವರ ಥರಾನೇ ಮಾಡ್ತಾರೇನೋ ಅಂತ. ಬರೀ ಕೈಯಲ್ಲಿ ನಿಂತಿದ್ದ ಜೀವಿ ಒಂದು ಕೈಯಲ್ಲಿ ನನ್ನ ಹಿಡ್ಕೊಳ್ತು. ನಾನು ತಪ್ಪಿಸ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇದೀನಿ, ಆಗ್ತಾನೇ ಇಲ್ಲ! ಹಂಗೋ ಹಿಂಗೋ ತಪ್ಪಿಸ್ಕೊಂಡು ಓಡಬೇಕು ಅನ್ನೋ ಅಷ್ಟರಲ್ಲಿ ಆ ಜೀವಿ ನನ್ನ ಕಾಲಿಗೆ ತನ್ನ ಕಾಲು ಅಡ್ಡ ಕೊಡ್ತು. ನಾನು ಬೋರಲಾಗಿ ಬಿದ್ದೆ. ಕಣ್ಣೆಲ್ಲ ಮಂಜು ಮಂಜು. ಆಗಲೇ ಆ ಜೀವಿ ಕುಕ್ಕರ್ ಥರದ ಪಾತ್ರೆ ಒಳಗಿಂದ ಒದ್ದೆಯಾಗಿ ನೀರಿನ ರೀತಿ ಇರೋ ಏನೋ ಒಂದನ್ನ ತೆಗೆದು ನನ್ನ ಮುಖಕ್ಕೆ ಹಚ್ಚೋಕೆ ಶುರು ಮಾಡ್ತು. ನಾನು ನನ್ನ ಶಕ್ತಿ ಎಲ್ಲಾ ಕೂಡಿಸಿ ನನ್ನ ಕೈ ಎತ್ತಿ ಅದರ ಕೈಗೆ ಹೊಡೆದೆ. ನಮ್ಮನೆ ನಾಯಿ ಕುಂಯ್ ಕುಂಯ್ ಅಂತ ಓಡಿ ಹೋಯ್ತು !!”
“ಅಂದರೆ ಇಲ್ಲೀ ತನಕ ನೀನು ಹೇಳಿದ್ದು?”
“ನೀನು ಏನು ತಿಳಿದುಕೊಂಡೆಯೋ ಅದೇ!”
“ಛೀ!! ಅದ್ಕೆ ಈ ಹಾಸಿಗೆ ಇಲ್ಲಿ ಒಣಗೋಕೆ ಹಾಕಿರೋದು. ರಾತ್ರಿ ಟಾಯ್ಲೆಟ್ ಅಂತ ಇದರಲ್ಲೇ?!! ಯಪ್ಪಾ! ಥೂ!”
“ಈಗ ಅದೆಲ್ಲ ಇರ್ಲಿ! ಮೊನ್ನೆ ಶುಕ್ರ ಗ್ರಹಣ ನೋಡಿದ್ಯಾ?”

Photo Courtesy : Google

You may also like...

1 Response

Leave a Reply

Your email address will not be published. Required fields are marked *