ಹೀಗೊಂದು ಇಂಬಳದ ಕಥೆ !

ಇಲ್ಲಿ ಇರೋ ಬದ್ಲು ಅಲ್ಲಿಗೆ ಹೋದ್ರೆ ಏನಾದ್ರು ಒಂದು ಕೆಲಸ ಸಿಗುತ್ತೆ, ಹೋಗಿ ಹುಡುಕು. ಅಂತ ಮಕ್ಕಳನ್ನ ಬೆಂಗ್ಳೂರಿಗೆ ಕಳಿಸೋ ಅಪ್ಪ-ಅಮ್ಮನ ಥರ ನಮ್ಮೂರಿನ ತೋಟದಲ್ಲಿ ಇರೋ ಇಂಬಳಗಳೂ ತಮ್ಮ ಮಗನನ್ನು ಬೆಂಗ್ಳೂರಿಗೆ ಕಳ್ಸೋ ಪಿಲಾನ್ ಮಾಡಿ ಕರೀ ಶೂ ಹಾಕ್ಕಂಡು ಕೆಂಪು ಬಸ್ ಹತ್ತೋಕೆ ಹೊರಟಿದ್ದ ಒಬ್ಬ ಹುಡುಗನ ಕಾಲಿಗೆ ಹತ್ತಿಸಿ ಟಾಟಾ ಮಾಡಿ ಬಂದ್ವು.
ಇತ್ತ ಹುಡುಗನ ಕರೀ ಶೂ, ಕರೀ ಸಾಕ್ಸನ್ನು ದಾಟಿದ ಮರಿ ಇಂಬಳ “ಇವತ್ತೊಂದು ದಿನ ಹಸಿವನ್ನು ತಡ್ಕೋ! ಬೆಂಗ್ಳೂರಿಗೆ ಹೋದ ಮೇಲೆ ದಿನವೂ ನಿಂಗೆ ಸಾಕು ಅನ್ನೋ ಅಷ್ಟು ಊಟ ಸಿಗುತ್ತೆ” ಅನ್ನೋ ಅಪ್ಪ ಅಮ್ಮನ ಎಚ್ಚರಿಕೆಯನ್ನು ಮೀರಿ ಹಸಿವು ತಾಳಲಾರದೆ ಹುಡುಗನ ಜೀನ್ಸ್ ಪ್ಯಾಂಟಿನ ಹಿಡಿತದಿಂದ ಹೊರ ಬಂದು ಅವನ ಮೊಣಕಾಲಿನ ಕೆಳಗೆ ಕೂತು ತನ್ನ ಊಟವನ್ನ ಶುರು ಮಾಡೇಬಿಟ್ಟಿತು.
ಊಟ ಮಾಡುತ್ತಾ ಹಾಗೇ ನಿದ್ದೆ ಹೋಗಿದ್ದ ಮರಿ ಇಂಬಳಕ್ಕೆ ಯಾರೋ ತನ್ನನ್ನು ಹಿಡಿದು ಎಳೆಯುತ್ತಿದ್ದಾರೆ ಎನಿಸಿ ಪೂರ್ತಿ ಎಚ್ಚರವಾಗುವಷ್ಟರಲ್ಲೇ ಹುಡುಗನ ಕೈ ಇವನನ್ನು ತೆಗೆದು ಬಸ್ಸಿನ ಕಿಟಕಿಯಿಂದ ಹೊರಗೆ ಎಸೆದಾಗಿತ್ತು. ಈ ರೀತಿಯಾಗಿ ಬೆಂಗ್ಳೂರಿಗೆಂದು ಹೊರಟಿದ್ದ ಮರಿ ಇಂಬಳ, ಚಿಕ್ಮಗಳೂರನ್ನೂ ತಲುಪದೆ ಬಾಳೆಹೊನ್ನೂರಿನ ಬಸ್ಟ್ಯಾಂಡಿನ ಬಳಿ ಮಲಗಿದ್ದ ಹೋರಿಯ ಬೆನ್ನು ಹತ್ತಿ ತನ್ನ ಊಟವನ್ನು ಮುಂದುವರೆಸಿತು!