ಕೊನೆಯಿಲ್ಲದ್ದು…

No End

ಪ್ರತೀ ಆರಂಭಕ್ಕೂ ಒಂದು ಅಂತ್ಯ ಇರಲೇಬೇಕು ಅಂತಾರಲ್ಲ, ಅದು ನಿಜವೇ ಇರಬೇಕು. ಈ ‘ಕೊನೆ’ ಅನ್ನೋದು ಒಬ್ಬೊಬ್ಬರಿಗೆ ಒಂದೊಂದು ಅನುಭವ. ಬೇಸರ, ದುಃಖ, ಕೋಪ, ಜಿಜ್ಞಾಸೆ, ಖುಷಿ, ಗೊಂದಲ ಇನ್ನೂ ಏನೇನೋ! ಹೇಳಲಾಗುವಂಥದ್ದು ಕೆಲವು, ಹೇಳಲಾಗದ್ದು ಹಲವು.

ನಮಗೆ ತುಂಬಾ ಬೇಕಾದವರು, ಇಷ್ಟವಾದವರು ತೀರಿಕೊಂಡರೆ ಆಗುವ ದುಃಖ ತಡೆಯಲಾರದ್ದು. ಅದೇ ಹಳೆಯ ನೆನಪುಗಳು ಎಷ್ಟೇ ಬೇಡವೆಂದರೂ ಮತ್ತೆ ಮತ್ತೆ ಎದುರಿಗೆ ಬಂದು ದುಃಖ, ಬೇಸರವನ್ನ ಹೆಚ್ಚಿಸಿಬಿಡುತ್ತವೆ. ಯಾರು ಏನೇ ಹೇಳಿದರೂ ನಮ್ಮ ಮನಸು ಮಾತ್ರ ಕೊರಗೋದು ಬಿಡಲ್ಲ ಅಥವಾ ಕೊರಗೋದನ್ನೇ ತನ್ನ ಗುರಿಯಾಗಿಸಿಕೊಂಡುಬಿಡುತ್ತೆ.

ಅದೇ ಯಾರೋ ಪರಿಚಯವಿರದವರು, ದೂರ ದೇಶದವರು, ಒಂದೆರಡು ಬಾರಿ ಕಂಡವರು ತೀರಿಕೊಂಡರೆ ನಮ್ಮ ಮನಸು “ಅಯ್ಯೋ ಪಾಪ” ಅಂತ ಕೆಲವು ಹೊತ್ತು ಕೊರಗಬಹುದೇ ಹೊರತು ಅದರ ಬಗ್ಗೆಯೇ ಯೋಚಿಸುತ್ತಾ ಕೂತುಬಿಡಲ್ಲ. ಜಾಲತಾಣಗಳಲ್ಲಿ ‘ಸೋ ಸ್ಯಾಡ್’, ‘R.I.P’ ಅಂತೆಲ್ಲಾ ಹೇಳಬಹುದೇ ಹೊರತು ತನ್ನ ಖುಷಿಯೇ ಮನಸಿಗೆ ಮುಖ್ಯ ಗುರಿಯಾಗಿ ಉಳಿದವೆಲ್ಲಾ ಅದರ ಮುಂದೆ ಗೌಣವಾಗಿಬಿಡುತ್ತೆ!

no-end

ಆದರೆ ತುಂಬಾ ಹತ್ತಿರದವರಲ್ಲದಿದ್ದರೂ, ತುಂಬಾ ಪರಿಚಯವಿರುವ ಕೆಲವರು ತೀರಿಕೊಂಡಾಗ ಈ ಮನಸು ತುಂಬಾ ವಿಚಿತ್ರವಾಗುತ್ತೆ!
ತುಂಬಾ ಬೇಜಾರು, ದುಃಖ ಆಗ್ತಿದ್ರೂ ಅದನ್ನ ತೋರಿಸಿಕೊಳ್ಳದೆ ಸಮಾಧಾನದಿಂದಿರುವಂತೆ ನಕ್ಕು ಬಿಡುತ್ತೆ.
ಇಂಥಾ ಸಮಯದಲ್ಲಿ ನಗೋದು ತಪ್ಪು ಅಂತ ಒಳಗೊಳಗೇ ಅತ್ತು ಬಿಡುತ್ತೆ.
ಅತ್ತೇನು ಪ್ರಯೋಜನ ಅಂತ ಮತ್ತೆ ಸಮಾಧಾನ ಮಾಡುತ್ತೆ!
ಒಟ್ಟಿನಲ್ಲಿ ತನಗೇನು ಮಾಡಬೇಕು ಅನ್ನೋದು ತಿಳಿಯದೆ ಸಿಕ್ಕಾಪಟ್ಟೆ ಗೊಂದಲದಲ್ಲಿರುತ್ತೆ.

ಇಂಥಾ ಮನಸು ಬೇರೆಯವರ ಸಾವಿನಲ್ಲೂ ‘ತಾನೇನು ಮಾಡಬೇಕು?’ ಅಂತಾನೆ ಯೋಚಿಸುವಷ್ಟು ಸ್ವಾರ್ಥಿಯೇ?!
ತನ್ನ ಬಗ್ಗೆ ತನಗೇ ಹೇಳದಷ್ಟು ಕಪಟಿಯೇ?!
ಏನೂ ಮಾಡಲು ತೋಚದ ಮಗುವೇ?!
ಅಥವಾ ತನ್ನನ್ನೇ ಮರೆಮಾಚಿ ಬದುಕುವ ಮೃಗವೇ?!

ಪ್ರತೀ ಆರಂಭಕ್ಕೂ ಒಂದು ಅಂತ್ಯ ಇರಲೇಬೇಕು ಅಂತಾರಲ್ಲ, ಅದು ಸುಳ್ಳಿರಬೇಕು!
ಮನಸಿನ ಭಾವನೆಗಳಿಗೆ ಕೊನೆಯಿಲ್ಲ No End 🙂

You may also like...

Leave a Reply

Your email address will not be published. Required fields are marked *