ಪರಿಸರ ದಿನ
ನಾ ಚಿಕ್ಕವನಿದ್ದಾಗ ಯಾವಾಗಲೋ ಒಂದು ದಿನ ಎಲ್ಲೋ ಒಂದು ಕಡೆಗೆ ಅಮ್ಮನ ಜೊತೆಗೆ ಬಸ್ಸಿನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಜೋರು ಹಸಿವಾಯ್ತು ( ಸಣ್ಣ ಮಕ್ಕಳಿಗೆ ಅದೊಂಥರ ಖಾಯಿಲೆ ಅನ್ನಿ). ಸರಿ! ಅಮ್ಮನ ಬಳಿ ಗಲಾಟೆ ಆರಂಭ “ಅಮ್ಮಾ! ಏನಾದ್ರು ಕೊಡ್ಸೆ?” ಅಂತ. ಅವಳಿಗೂ ಬೈದು ಬೈದು ಸುಸ್ತಾಯ್ತು ಅನ್ಸತ್ತೆ ಯಾವ್ದೋ ಒಂದು ಕಡೆ ಬಸ್ಸು ನಿಲ್ಲಿಸಿದಾಗ “ಏನ್ ಬೇಕೋ ತಗೊಂಡ್ಬಾ” ಅಂತ ದುಡ್ಡು ಕೊಟ್ಳು ! ನಾನು ಖುಷಿಯಿಂದ ಹೋಗಿ ಒಂದು ಪ್ಯಾಕು ಬಿಸ್ಕೆಟ್ , ಒಂದು ಪ್ಯಾಕು ಚಿಪ್ಸ್ ತಗೊಂಡು ಬಂದೆ. ಮೊದ್ಲು ಚಿಪ್ಸ್ ತಿನ್ನೋಣ ಅಂತ ತಿನ್ನೋಕೆ ಶುರು ಮಾಡ್ದೆ. ಹಸಿವಾಗಿದ್ದಕ್ಕೋ ಏನೋ ಬೇಗ ಖಾಲಿ ಆಯ್ತು. ಚಿಪ್ಸ್ ತಿಂದು ಆದ್ಮೇಲೆ ಖಾಲಿ ಕವರ್ ಹಿಡ್ಕೊಂಡು ಏನ್ ಮಾಡ್ತಾರೆ? ಹೊರಗೆ ಎಸೆಯೋಣ ಅಂತ ಕಿಟಕಿಯಿಂದ ಕೈ ಹೊರಗೆ ಹಾಕಿದ್ದೆನಷ್ಟೆ, ಅಮ್ಮ ನನ್ನ ಕೈಯನ್ನು ಹಿಡಿದು ಒಳಗೆ ಎಳೆದುಕೊಂಡಳು.
ಈ ಸಲ ನಾನೇನು ತಪ್ಪು ಮಾಡಿದೆ ಅಂತ ಅನ್ಕೊಳ್ತಾ ಇರ್ಬೇಕಾದ್ರೆ ಆ ಪ್ಲಾಸ್ಟಿಕ್ ಕವರ್ ಅನ್ನು ನನ್ನ ಕೈಯಿಂದ ತಗೊಂಡು, ನನ್ನ ಕಿವಿ ಹಿಂಡುತ್ತಾ “ಎಷ್ಟು ಸಲ ಹೇಳಿದೀನಿ ನಿಂಗೆ? ಹೊರಗೆ ಎಲ್ಲೂ ಕಸ ಹಾಕಬೇಡ, ಮನೆಗೆ ತಗೊಂಡು ಬಂದು ಮನೇಲೆ ಕಸದ ಬುಟ್ಟಿಗೆ ಹಾಕು ಅಂತ” ಅಂತ ಹೇಳಿ ಆ ಪ್ಲಾಸ್ಟಿಕ್ ಕವರ್ ನ ಅವಳ ಹತ್ರ ಇದ್ದ ಬ್ಯಾಗ್ ಒಳಗಡೆ ಹಾಕಿಕೊಂಡಳು. ನಮ್ಮ ಸಣ್ಣ ಬುದ್ದಿ ಎಲ್ಲಿಗ್ ಹೋಗತ್ತೆ? “ಅಲ್ಲಿ ಗುಡಿಸುತ್ತ ಇದ್ರು ಹೆಂಗಿದ್ರು ಗುಡಿಸ್ತಾರಲ್ಲ ಅದ್ಕೆ ಹಾಕೋಕೆ ಹೋದೆ” ಅಂದೆ.